ಕುಂಬಳೆ: ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ತೆಂಕುತಿಟ್ಟಿನ ಜನಪ್ರಿಯ ಪ್ರಸಂಗಕರ್ತ, ಅಭಿನವ ಪಾರ್ತಿಸುಬ್ಬನೆಂದೇ ಖ್ಯಾತಿ, ನೆಗಳ್ತೆ ಪಡೆದ ಪ್ರಸಂಗಕರ್ತ, ಕಟೀಲು ಮೇಳದ ಸವ್ಯಸಾಚಿ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಗಂಭೀರ ಅನಾರೋಗ್ಯದ ಅಪೂರ್ವ ರೋಗಕ್ಕೆ ತುತ್ತಾಗಿದ್ದು ಅವರಿಗೆ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ವತಿಯಿಂದ ಸಕಾಲಿಕ ಚಿಕಿತ್ಸಾ ನೆರವು ನೀಡಲಾಯಿತು.
ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ದುಬಾಯಿಯ ಯಕ್ಷಗಾನ ಶಿಕ್ಷಕ ಶೇಖರ ಶೆಟ್ಟಿಗಾರ್ ಕಿನ್ನಿಗೋಳಿ ಇವರ ಮುತುವರ್ಜಿಯಿಂದ ದುಬಾಯಿಯಲ್ಲಿ ಸಂಗ್ರಹಿಸಿದ ರೂ. 2 ಲಕ್ಷದ 60 ಸಾವಿರ ವನ್ನು ಮಂಗಳೂರಿನಲ್ಲಿ ಸದ್ಯ ಚಿಕಿತ್ಸೆಗಾಗಿ ನೆಲೆಸಿರುವ ಪೂಂಜರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಮಾ.15ರಂದು ಮಂಗಳೂರಿನ ಬಿಜೈಯಲ್ಲಿರುವ ಅವರ ತಾತ್ಕಾಲಿಕ ನಿವಾಸಕ್ಕೆ ತೆರಳಿದ ದಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಪ್ರತಿನಿಧಿ, ಕಲಾವಿದ ವಾಸು ಬಾಯಾರು ಕಾಸರಗೋಡು ಮತ್ತು 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಪ್ರ. ಸಂಪಾದಕ, ಲೇಖಕ ಎಂ.ನಾ. ಚಂಬಲ್ತಿಮಾರ್ ಇವರು ದುಬಾಯಿಯ ಚಿಕಿತ್ಸಾ ಸಹಾಯನಿಧಿ ಹಸ್ತಾಂತರಿಸಿದರು.
ಭಾಗವತ ಪೂಂಜರು ಕಳೆದ ಕೆಲವು ಸಮಯದಿಂದ ರಕ್ತಸಂಬಂಧೀ ಕಾಯಿಲೆಯಿಂದ ಬಳಲುತಿದ್ದಾರೆ. ಅವರ ಚಿಕಿತ್ಸೆಗಾಗಿ ನಿರ್ದಿಷ್ಟ ಔಷಧಿ ಬೇಕಾಗಿದ್ದು, ಅದು ಭಾರತದಲ್ಲಿ ಅಲಭ್ಯ. ಅದನ್ನು ಯು.ಕೆ. ಯಿಂದ ವಿಶೇಷವಾಗಿ ಆಮದು ಮಾಡಿಸಬೇಕಾಗಿದೆ. 6 ತಿಂಗಳ ಚಿಕಿತ್ಸೆಗೆ ಕನಿಷ್ಟ 40ಲಕ್ಷ ರೂಪಾಯಿ ವೆಚ್ಚ ತಗುಲಬಹುದೆಂದು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಗವತರ ಕುಟುಂಬ ಯಕ್ಷಗಾನ ಅಭಿಮಾನೀ ಸಹೃದಯರ ಸಹಾಯ ಹಸ್ತವನ್ನು ಕೋರಿದೆ.
ಯಕ್ಷಗಾನದ ಭಾಗವತರಷ್ಟೇ ಅಲ್ಲದೇ ಪ್ರಸಂಗಕರ್ತ, ಹಿಮ್ಮೇಳದ ಸಮಗ್ರ ಜ್ಞಾನ ಹೊಂದಿದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಸಮಕಾಲೀನ ಯಕ್ಷರಂಗದ ಮೇರು ವಿದ್ವಾಂಸ. ಅವರಿಗೆ ಚಿಕಿತ್ಸಾ ಸಹಾಯ ಒದಗಿಸಿ ಅವರನ್ನು ಚೇತರಿಸಿ ಕಾಪಾಡ ಬೇಕಾದುದು ಸುಸಂಸ್ಕøತ ನಾಗರಿಕ ಸಮಾಜದ ಬದ್ಧತೆಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಕಾಲಿಕವಾಗಿ ಅವರಿಗೆ ಚಿಕಿತ್ಸಾ ಸಹಾಯಧನಗಳು ಅನಿವಾರ್ಯ ಎನಿಸಿದೆ.





