ಬದಿಯಡ್ಕ: ಕರ್ನಾಟಕ ಜಾನಪದ ಪರಿಷತ್ತಿನ ಪ್ರತಿಷ್ಠಿತ ಜಾನಪದ ಲೋಕ ಪ್ರಶಸ್ತಿಯನ್ನು ಕಾಸರಗೋಡಿನ ಬಹುಶ್ರುತ ವಿದ್ವಾಂಸ, ಜಾನಪದ ಕಲಾವಿದ, ಯಕ್ಷಗಾನ ಪೋಷಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರು ರಾಮನಗರದಲ್ಲಿರುವ ಜಾನಪದ ಲೋಕದಲ್ಲಿ ಇತ್ತೀಚೆಗೆ ನಡೆದ ವೈಭವದ ತ್ರಿದಿನ ಪ್ರವಾಸಿ ಜಾನಪದ ಲೋಕೋತ್ಸವ ಸಂದರ್ಭದ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಆದಿಚುಂಚನಗಿರಿ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಜಾಪ ಕೇಂದ್ರ ಸಮಿತಿ ಅಧ್ಯಕ್ಷ ಟಿ.ತಿಮ್ಮೇಗೌಡ, ಕಜಾಪ ಆಡಳಿತ ಟ್ರಸ್ಟಿ ಆದಿತ್ಯ ನಂಜರಾಜ ಸಹಿತ ಪ್ರಮುಖರು ಭಾಗವಹಿಸಿದ್ದರು.
ಜಾನಪದ ಕಲೆಯ ಉಳಿವಿಗೆ ನೀಡಿದ ಸೇವೆಯನ್ನು, ಜಾನಪದ ಕ್ಷೇತ್ರದ ಜೀವಮಾನದ ಸಾಧನೆಯನ್ನು ಪರಿಗಣಿಸಿ ಪ್ರೊ. ಶ್ರೀನಾಥರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.





