HEALTH TIPS

ಉದ್ಯೋಗ ನಷ್ಟ, ಆದಾಯ ಖೋತಾದಿಂದ ಪಡಿಪಾಟಲು

         ನವದೆಹಲಿ: ಕೋವಿಡ್‌ ಲಾಕ್‌ಡೌನ್‌ ಪರಿಣಾಮಗಳಿಂದ ಹೊರಬರಲು ಗ್ರಾಮೀಣ ಸಮುದಾಯಕ್ಕೆ ಆದಾಯದಲ್ಲಿನ ಖೋತಾ ಹಾಗೂ ಉದ್ಯೋಗ ನಷ್ಟವೇ ದೊಡ್ಡ ತೊಡಕಾಗಿದೆ.

       ಇಂಡಿಯನ್‌ ಸ್ಕೂಲ್‌ ಆಫ್‌ ಡೆವಲಪ್‌ಮೆಂಟ್‌ ಮ್ಯಾನೇಜ್‌ಮೆಂಟ್ (ಐಎಸ್‌ಡಿಎಂ) ಮತ್ತು ಐ-ಇಂಪ್ಯಾಕ್ಟ್‌ ಸೇವಾ ಸಂಸ್ಥೆ 10 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಈ ಅಂಶವು ವ್ಯಕ್ತವಾಗಿದೆ. ರಾಜಸ್ಥಾನ, ಹರಿಯಾಣ, ಬಿಹಾರ, ಹಿಮಾಚಲಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಡ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಒಟ್ಟು 900 ಗ್ರಾಮಗಳಲ್ಲಿ 4800 ಕುಟುಂಬಗಳು ಸಮೀಕ್ಷೆಗೆ ಪ್ರತಿಕ್ರಿಯಿಸಿವೆ.

          ಆದಾಯದಲ್ಲಿನ ಖೋತಾ, ಜೀವನಾಧಾರವಾಗಿದ್ದ ಉದ್ಯೋಗ ನಷ್ಟ, ಆಹಾರ ಮತ್ತು ನೀರಿನ ಕೊರತೆ, ಮಕ್ಕಳ ಶಿಕ್ಷಣದ ಮೇಲೆ ಆಗಿರುವ ನಕಾರಾತ್ಮಕ ಪರಿಣಾಮ -ಇವು, ಲಾಕ್‌ಡೌನ್‌ ತೆರವಾದ ನಂತರದ ಸ್ಥಿತಿಯಲ್ಲಿ ಗ್ರಾಮೀಣ ಭಾಗದಲ್ಲಿ ಕುಟುಂಬಗಳನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳು.

ಲಾಕ್‌ಡೌನ್‌ ವೇಳೆ ಶೇ 17ರಷ್ಟು ಕುಟುಂಬಗಳಷ್ಟೇ ಉದ್ಯೋಗ ಅಥವಾ ಆದಾಯಮೂಲ ಉಳಿಸಿಕೊಂಡಿವೆ. ಶೇ 96ರಷ್ಟು ಕುಟುಂಬಗಳು ನಾಲ್ಕು ತಿಂಗಳಿಗಿಂತಲೂ ಹೆಚ್ಚು ಅವಧಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಲಿಲ್ಲ. ಇದೇ ಕಾರಣದಿಂದ ಶೇ 15ರಷ್ಟು ಕುಟುಂಬಗಳು ನಗರಗಳಿಗೆ ಮರುವಲಸೆಗೆ ತೀರ್ಮಾನಿಸಿದ್ದವು. ಇದು, ಒಟ್ಟಾಗಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿತು ಎಂದು ಸಮೀಕ್ಷೆಯು ವ್ಯಾಖ್ಯಾನಿಸಿದೆ.

         ಪ್ರತಿ 10ರಲ್ಲಿ ನಾಲ್ಕು ಕುಟುಂಬಗಳು ಬಾಹ್ಯ ಬೆಂಬಲವಿಲ್ಲದೇ ಯಥಾಸ್ಥಿತಿ ಕಾಪಾಡಿಕೊಳ್ಳಲು ಅಶಕ್ತವಾಗಿದ್ದವು. ಗ್ರಾಮೀಣ ಸಮುದಾಯದ ಪ್ರತಿ ಮೂರನೇ ಪದವೀಧರ ಮನೆಕೆಲಸ, ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದಾನೆ ಎಂದು ಲಾಕ್‌ಡೌನ್‌ ನಂತರದ ಪರಿಸ್ಥಿತಿಯನ್ನು ಸಮೀಕ್ಷೆಯು ವಿವರಿಸಿದೆ.

       ಈ ಸವಾಲುಗಳನ್ನು ಎದುರಿಸಲು ಕೌಶಲ ಆಧಾರಿತ ಉದ್ಯೋಗವಕಾಶ ಸೃಷ್ಟಿಸಲು ಪೂರಕ ನೀತಿಯನ್ನು ರೂಪಿಸಬೇಕಾಗಿದೆ. ಗ್ರಾಮೀಣ ಭಾರತದಲ್ಲಿನ ಸದ್ಯದ ಶಿಕ್ಷಣ, ಕೌಶಲ ಮತ್ತು ಜನಸಂಖ್ಯೆಯನ್ನು ಆಧರಿಸಿ ಉದ್ಯೋಗದ ಭರವಸೆಯನ್ನು ನೀಡಬೇಕಾಗಿದೆ ಎಂದು ಸಮೀಕ್ಷೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

         ಐಎಸ್‌ಡಿಎಂ ನಿರ್ದೇಶಕ ಅರುಣಾ ಪಾಂಡೆ ಅವರು, ಯುವಜನರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಉದ್ಯೋಗ ಖಾತರಿ ಯೋಜನೆ ಮತ್ತು ಸ್ಕಿಲ್‌ ಇಂಡಿಯಾ ಯೋಜನೆಗಳು ಭಾರತದ ಚಿತ್ರಣ ಬದಲಿಸಬಲ್ಲವು. ಗ್ರಾಮೀಣ ಭಾರತದ ಯವಜನರ ಶಿಕ್ಷಣಕ್ಕೆ ಅನುಗುಣವಾಗಿ ಉದ್ಯೋಗದ ಖಾತರಿ ನೀಡುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ ಎಂದು ಹೇಳಿದ್ದಾರೆ.

       ಕೋವಿಡ್‌ ಸೋಂಕು ವ್ಯಾಪಿಸುವುದನ್ನು ತಡೆಯಲು ಕಳೆದ ವರ್ಷ ಮಾರ್ಚ್‌ 25ರಂದು ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಲಾಗಿತ್ತು. ಆರ್ಥಿಕ ಚಟುವಟಿಕೆಯು ಅಸ್ತವ್ಯಸ್ತಗೊಂಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries