ಕಾಸರಗೋಡು: ವಿಧಾನ ಸಭಾ ಚುನಾವಣೆಗೆ ತಿಂಗಳಷ್ಟೇ ಬಾಕಿ ಇರುವಂತೆ ಜಿಲ್ಲೆಯ ಕುತೂಹಲಕರ ಕ್ಷೇತ್ರವಾದ ಮಂಜೇಶ್ವರದಲ್ಲಿ ಯಾವ್ಯಾವ ಪಕ್ಷದಿಂದ ಯಾರೆಲ್ಲ ಸ್ಪರ್ಧಿಸುವರೆಂಬ ಬಗ್ಗೆ ಜನರಿಗೆ ಕುತೂಹಲ ತೀವ್ರಗೊಂಡಿದೆ. ಪ್ರಸ್ತುತ ಶಾಸಕನಾಗಿರುವ ಯುಡಿಎಫ್ ನ ವಿವಾದಾತ್ಮಕ ಮುಖಂಡ ಎಂ.ಸಿ.ಕಮರುದ್ದೀನ್ ಅವರ ಹೆಸರು ಸ್ಪರ್ಧಾಳುಗಳ ಪಟ್ಟಿಯಲ್ಲಿಲ್ಲ ಎಮದು ತಿಳಿದುಬಂದಿದೆ. ಜೊತೆಗೆ, ಯೂತ್ ಲೀಗ್ ನಾಯಕರ ಹೆಸರುಗಳು ಕೇಳಿಬರುತ್ತಿದೆ. ಮಂಜೇಶ್ವರ ಬ್ಲಾಕ್ ಪಂಚಾಯತಿ ಮಾಜಿ ಅಧ್ಯಕ್ಷ ಮತ್ತು ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ಎ.ಕೆ.ಎಂ. ಅಶ್ರಫ್ ಮತ್ತು ಮಾಜಿ ಶಾಸಕ ಪಿಬಿ ಅಬ್ದುಲ್ ರಜಾಕ್ ಅವರ ಪುತ್ರ ಪಿ.ಬಿ ಶಫೀಕ್ ಅವರ ಹೆಸರುಗಳು ಚಾಲ್ತಿಯಲ್ಲಿವೆ.
ಫ್ಯಾಷನ್ ಗೋಲ್ಡ್ ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಎಂ.ಸಿ.ಕಮರುದ್ದೀನ್ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂದು ಮುಸ್ಲಿಂ ಲೀಗ್ ಹೇಳಿದೆ. ಕಮರುದ್ದೀನ್ ಪ್ರಕರಣವು ಚುನಾವಣೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಲೀಗ್ ಶ್ರಮಿಸಬೇಕಾಗುತ್ತದೆ. ಕಮರುದ್ದೀನ್ ವಿರುದ್ಧದ ವಂಚನೆ ಪ್ರಕರಣವನ್ನು ಅಭಿಯಾನದಲ್ಲಿ ಪ್ರಮುಖ ಅಸ್ತ್ರವಾಗಿ ಬಳಸುವ ಸಾಧ್ಯತೆ ಎಲ್.ಡಿ.ಎಫ್ ಹಾಗೂ ಬಿಜೆಪಿಯದ್ದಾಗಿದೆ ಎನ್ನಲಾಗಿದೆ.
ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಮುಸ್ಲಿಂ ಲೀಗ್ ಪಕ್ಷದ ಹೊರತಾಗಿ ಪಿ.ಕೆ.ಕುನ್ಹಾಲಿಕುಟ್ಟಿಯೇ ಸ್ವತಃ ಕಮರುದ್ದೀನ್ ಅವರನ್ನು ರಕ್ಷಿಸಲು ಮುಂದಾಗಿದ್ದರು. ಬಂಧನವನ್ನು ರಾಜಕೀಯ ಪ್ರೇರಿತವಾಗಿಸಲು ಲೀಗ್ ಪ್ರಯತ್ನಿಸಿತು. ಜೈಲಿನಿಂದ ಬಿಡುಗಡೆಯಾದ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಎಂದು ಪಕ್ಷ ನಿರ್ಧರಿಸುತ್ತದೆ ಎಂದು ಕಮರುದ್ದೀನ್ ಹೇಳಿದ್ದರು.
ಶಾಸಕ ಕಮರುದ್ದೀನ್ ಬಂಧನವು ರಾಜಕೀಯ ಪ್ರೇರಿತವಾಗಿದೆ ಎಂದು ಯುಡಿಎಫ್ ಆರೋಪಿಸಿತ್ತು. ಫ್ಯಾಶನ್ ಗೋಲ್ಡ್ ಪ್ರಕರಣದಲ್ಲಿ ಕಮರುದ್ದೀನ್ ಭ್ರಷ್ಟನಲ್ಲ ಮತ್ತು ಅದು ಅವನ ವ್ಯವಹಾರದ ಕುಸಿತದಿಂದಾಗಿ ಎಂದು ಯುಡಿಎಫ್ ಹೇಳಿಕೊಂಡಿದೆ. ಅಂತಿಮ ತೀರ್ಮಾನವಾಗದಿದ್ದರೂ ಈವರೆಗಿನ ವರದಿಯಂತೆ ಕಮರುದ್ದೀನ್ ಹೆಸರು ಸ್ಪರ್ಧಾಳುಗಳ ಮೊದಲ ಪಟ್ಟಿಯಲ್ಲಿರದು ಎಂದೇ ಮೂಲಗಳು ತಿಳಿಸಿವೆ.






