ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಜೀರ್ಣೋದ್ದಾರ ಚಟುವಟಿಕೆಗಳ ಪೂರ್ವಭಾವಿಯಾಗಿ ಅಖಂಡ ಭಜನ ಕಾರ್ಯಕ್ರಮಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.
ಭಜನ ಸಂಕೀರ್ತನೆಯನ್ನು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪ ಪ್ರಜ್ವಲನೆಗೈದು ಶುಭಾರಂಭ ಮಾಡಿದರು. ಶ್ರೀ ಕ್ಷೇತ್ರದಲ್ಲಿ ಭಜನೆಯು ನಡೆಯುವುದರ ಮೂಲಕ ಜೀರ್ಣೋದ್ದಾರ ಕಾರ್ಯ ವೇಗಪಡೆದು ಬ್ರಹ್ಮಕಲಶವು ನಡೆಯಲು ಕೃಷ್ಣ ಪರಮಾತ್ಮನು ಅನುಗ್ರಹಿಸುತ್ತಾನೆ. ಊರಿಗಿದು ಒಳಿತನ್ನು ತರುವುದು ಎಂದು ಅವರು ಅನುಗ್ರಹ ಸಂದೇಶ ನೀಡಿದರು.ಬಳಿಕ ವಿವಿಧ ತಂಡಗಳಿಂದ ಸಂಕೀರ್ತನೆ ನಡೆಯಿತು.
ಸಂಜೆ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸಹಸ್ರಾವರ್ತಿ ನಾಮಜಪಕ್ಕೆ ನೇತೃತ್ವ ನೀಡಿದರು. ಎಲ್ಲ ಅಡ್ಠಿ ಆತಂಕಗಳು ದೂರವಾಗಿ ಜೀರ್ಣೋಧ್ಧಾರ ಕಾರ್ಯ ನಡೆದು ಬ್ರಹ್ಮಕಲಶವು ನೆರವೇರುವುದೆಂದು ಆಶೀರ್ವಚನದಲ್ಲಿ ತಿಳಿಸಿದರು. ಶ್ರೀ ಕ್ಷೇತ್ರದ ಕಾರ್ಯ ನಿರ್ವಾಹಣಾಧಿಕಾರಿಗಳು, ಜೀರ್ಣೋದ್ದಾರ ಸಮಿತಿ, ಭಜನಾ ಸಮಿತಿಯವರು ಸ್ವಾಮೀಜಿಯವರನ್ನು ಬರಮಾಡಿಕೊಂಡರು. ಊರ ಭಜನಾ ತಂಡಗಳಿಂದ ಸಂಕೀರ್ತನೆಯು ನಡೆಯಿತು.
ಇಂದು ಬೆಳಿಗ್ಗೆ 7ಕ್ಕೆ ಅಖಂಡ ಭಜನೆಯ ಮಹಾಮಂಗಳಾರತಿ ನೆರವೇರಿತು. 8ಕ್ಕೆ ವಿಧಿವಿಧಾನಗಳೊಂದಿಗೆ ನೂತನ ಗೋಪುರ ನಿರ್ಮಾಣಕ್ಕೆ ವೃಷಭನಿಂದ ಹಳೆಯ ಕಟ್ಟಡ ಮುರಿಯುವ ಕೆಲಸಕ್ಕೆ ಚಾಲನೆ ನೀಡಲಾಯಿತು. 8.30 ರಿಂದ ಸಾರ್ವಜನಿಕ ಭಕ್ತವೃಂದದವರಿಂದ ಕರಸೇವೆ ನಡೆಯಲಿದೆ.







