ನವದೆಹಲಿ: 2021 ರ ನೂತನ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ನೋಟಿಸ್ ನೀಡಿ, ಅವರ ಪ್ರತಿಕ್ರಿಯೆ ಸಲ್ಲಿಕೆಗೆ ಹೇಳಿದೆ.
ಡಿಜಿಟಲ್ ನ್ಯೂಸ್ ಮಾಧ್ಯಮವನ್ನು ನಿಯಂತ್ರಿಸಲು ಫೆಬ್ರವರಿ 25 ರಂದು ಸರ್ಕಾರ ಹೊರಡಿಸಿದ ಹೊಸ ಐಟಿ ನಿಯಮಗಳು ಕಾನೂನುಬಾಹಿರವೆಂದು ಆರೋಪಿಸಿ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿತು. ಅರ್ಜಿದಾರರ ವಾದದಂತೆ ಡಿಜಿಟಲ್ ಸುದ್ದಿ ಮಾಧ್ಯಮಗಳಿಗೆ ಇದು ಗಂಭೀರವಾದ ಹಾನಿಯನ್ನುಂಟುಮಾಡುತ್ತದೆ ಮತ್ತು ಅವರ ಹಕ್ಕುಗಳನ್ನು ಚ್ಯುತಿ ಮಾಡುತ್ತದೆ.
ಅರ್ಜಿಯಲ್ಲಿ "ಐಟಿ ನಿಯಮಗಳನ್ನು ಅನೂರ್ಜಿತ ಮತ್ತು ನಿಷ್ಕ್ರಿಯವಾಗಿದೆ" ಎಂದು ಘೋಷಿಸಲು ಕೋರಲಾಗಿದೆ.


