ಚೆನ್ನೈ : ಅಶೋಕ ಚಕ್ರ ಹಾಗೂ ತ್ರಿರಂಗದ ಭಾರತ ನಕ್ಷೆಯ ಚಿತ್ರವಿದ್ದ ಕೇಕ್ ಕತ್ತರಿಸುವುದು ಅವಮಾನವಲ್ಲ ಎಂದಿರುವ ಮದ್ರಾಸ್ ಹೈಕೋರ್ಟ್, ರಾಷ್ಟ್ರೀಯ ಗೌರವ ಕಾಯ್ದೆ 1971ರ ಅಡಿಯಲ್ಲಿ ಇದನ್ನು ಅವಮಾನ ಎಂದು ಹೇಳುವಂತಿಲ್ಲ ಎಂದಿದೆ.
ನ್ಯಾಯಮೂರ್ತಿ ಎ. ಆನಂದ ವೆಂಕಟೇಶ್ ಅವರು ಈ ತೀರ್ಪು ನೀಡಿದ್ದಾರೆ. ರಾಷ್ಟ್ರೀಯ ಗೌರವ ಕಾಯ್ದೆಯ ಕುರಿತು ಅವಲೋಕನ ನಡೆಸಿ ಈ ತಿರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. 2013ರಲ್ಲಿ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಿದ್ದಾರೆ.
ಭಾರತದಂಥ ಪ್ರಜಾಪ್ರಭುತ್ವ ದೇಶದಲ್ಲಿ ರಾಷ್ಟ್ರೀಯತೆ ಎಂಬುದು ಬಹಳ ಮಹತ್ವದ್ದು ಎಂಬುದರಲ್ಲಿ ಸಂದೇಹವಿಲ್ಲ ಎಂದು ರವೀಂದ್ರನಾಥ್ ಠ್ಯಾಗೋರ್ ಅವರ ದೇಶಭಕ್ತಿ ಹಾಗೂ ಮಾನವೀಯತೆ ಕುರಿತ ಹೇಳಿಕೆಯನ್ನೂ ಉಲ್ಲೇಖಿಸಿದ್ದಾರೆ.
2013ರಲ್ಲಿ ನಡೆದ ಘಟನೆ ಇದಾಗಿದ್ದು, ಕ್ರಿಸ್‌ಮಸ್ ಸಂದರ್ಭ ತ್ರಿವರ್ಣದ ಭಾರತ ನಕ್ಷೆಯ ಚಿತ್ರವಿರುವ 6x5 ಅಡಿ ಕೇಕ್ ಕತ್ತರಿಸಿ ಸುಮಾರು 2500 ಮಂದಿಗೆ ಹಂಚಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೊಯಮತ್ತೂರು ಡಿಸಿ, ಡಿಸಿಪಿ ಎಲ್ಲರೂ ಭಾಗವಹಿಸಿದ್ದರು. ಡಾ. ಸೆಂತಿಲ್ ಕುಮಾರ್ ಎಂಬುವರು ಈ ಕೇಕ್ ವಿನ್ಯಾಸದ ಬಗ್ಗೆ ತಕರಾರು ತೆಗೆದಿದ್ದು, ತ್ರಿವರ್ಣ ಧ್ವಜದ ಚಿತ್ರ ಹೊಂದಿರುವ ಕೇಕ್ ಕತ್ತರಿಸಿದ್ದು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದಂತೆ ಎಂದು ದೂರು ಸಲ್ಲಿಸಿದ್ದರು.
ಈ ಕುರಿತು ಸುದೀರ್ಘ ಅವಲೋಕನವೂ ನಡೆದಿದ್ದು, ಸೋಮವಾರ, ಈ ಸಂಗತಿಯನ್ನು ಅವಮಾನ ಎಂದು ಪರಿಗಣಿಸುವಂತಾದರೆ, ರಾಷ್ಟ್ರ ಧ್ವಜ ಹಿಡಿಯಲು ಮುಂದೊಂದು ದಿನ ಜನರು ಭಯ ಪಡಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.





