ತಿರುವನಂತಪುರ: ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಮುನ್ನಡೆಸಿದ ವಿಜಯ ಯಾತ್ರೆ ಈ ಸಂಜೆ ತಿರುವನಂತಪುರ ಶಂಕುಮುಖಂ ಕಡಲ ಕಿನಾರೆ ಪ್ರದೇಶದಲ್ಲಿ ಸಜ್ಜುಗೊಳಿಸಿದ ಬೃಹತ್
ವೇದಿಕೆಯಲ್ಲಿ ಕಿಕ್ಕಿರಿದು ನೆರೆದ ಅಭಿಮಾನಿಗಳ ಸಮ್ಮುಖ ಸಮಾರೋಪಗೊಂಡಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನಸ್ತೋಮ ಉದ್ದೇಶಿಸಿ ಸಮಾರೋಪ ಭಾಷಣ ಮಾಡಿದರು. ಕಳೆದ ಫೆಬ್ರವರಿ 21 ರಂದು ಕಾಸರಗೋಡಿನಿಂದ ಆರಂಭಗೊಂಡಿದ್ದ ವಿಜಯ ಯಾತ್ರೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಿ ಚಾಲನೆ ನೀಡಿದ್ದರು ವಿಧಾನ ಸಭಾ ಚುನಾವಣೆಯನ್ನು ಗುರಿಯಾಗಿರಿಸಿ ನಡೆಸಲಾದ ಯಾತ್ರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಿ ತಿರುವನಂತಪುರದಲ್ಲಿ ಇಂದು ಸಮಾರೋಪಗೊಂಡಿತು.
ಮುಖ್ಯಮಂತ್ರಿ ತನ್ನ ಸ್ವಂತ ಜವಾಬ್ದಾರಿಯನ್ನು ನಿರ್ವಹಿಸಿಲ್ಲ-ಚಿನ್ನ ಕಳ್ಳಸಾಗಾಣಿಕೆ, ಶಬರಿಮಲೆ ಪ್ರಕರಣಗಳು ಎಡರಂಗದ ಅಧಿಕಪ್ರಸಂಗ-ಅಮಿತ್ ಶಾ
ಅಮಿತ್ ಶಾ ಮಾತನಾಡಿ ಎಡರಂಗ ರಾಜ್ಯದಲ್ಲಿ ವ್ಯಾಪಕವಾದ ಅಕ್ರಮ, ವಂಚನೆಗಳಲ್ಲಿ ಮುಳುಗೇಳುತ್ತಿದೆ ಎಂದು ಟೀಕಿಸಿದರು. ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಸಂಬಂಧಿಸಿ ರಾಜ್ಯ ಸರ್ಕಾರದ ಶಾಮೀಲಿನ ಬಗ್ಗೆ ಮುಖ್ಯಮಂತ್ರಿ ಪ್ರತ್ಯುತ್ತರಿಸಬೇಕು ಎಂದರು. ಡಾಲರ್, ಚಿನ್ನ ಸಾಗಾಣಿಕೆ ಪ್ರಕರಣದ ಆರೋಪಿಗಳೆಲ್ಲ ನಿಮ್ಮದೇ ಕಚೇರಿಯಲ್ಲಿ ಉದ್ಯೋಗಿಗಳಾಗಿದ್ದವರಲ್ಲವೇ?ಪ್ರಕರಣ ಸಂಬಂಧ ಮುಖ್ಯ ಆರೋಪಿಯಾದ ಸ್ತ್ರೀ ಮುಖ್ಯಮಂತ್ರಿ ಕಚೇರಿಗೆ ನಿರಂತರ ಭೇಟಿ ನೀಡುತ್ತಿದ್ದುದಾದರೂ ಯಾಕೆಂಬುದನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಬಲ್ಲರೇ ಎಂದು ಅಮಿತ್ ಶಾ ಸವಾಲೆಸೆದರು.
ಶಬರಿಮಲೆಯ ವಿಧಿವಿಧಾನಗಳು ಸಂಪ್ರದಾಯ ಅನುಸಾರ ಭಕ್ತರ ಅಭಿಪ್ರಾಯದಂತೆ ನಿರ್ವಹಿಸಲ್ಪಡಬೇಕು. ಅಲ್ಲದೆ ಈ ಬಗ್ಗೆ ಇಲ್ಲಿಯ ಎಡ ಪಕ್ಷ ತೀರ್ಮಾನಿಸಿದಂತೆ ಚಟುವಟಿಕೆಗಳನ್ನು ನಡೆಸುವಂತದ್ದಲ್ಲ. ರಾಜ್ಯದಲ್ಲಿ ಎಲ್.ಡಿ.ಎಫ್-ಯುಡಿಎಫ್ ಹೊಂದಾಣಿಕೆಯ ರಾಜಕೀಯ ಮಾಡುತ್ತಿದೆ. ಇಲ್ಲಿ ಜಗಳವಾಡುವ ಅವುಗಳು ಕೇಂದ್ರದಲ್ಲಿ ಜೊತೆಯಾಗಿ ಭುಜಕ್ಕೆ ಭುಜ ನೀಡುತ್ತವೆ.
ಕೇರಳದ ಸಮಗ್ರ ಅಭಿವೃದ್ದಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ಗಮನ ನೀಡುತ್ತಿದೆ. ಹಲವು ಕೇಂದ್ರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಲೋಕದಲ್ಲಿ ಎಲ್ಲೂ ಇರದ ರೀತಿಯಲ್ಲಿ ಜಾಗತಿಕ ಮಾದರಿಯಾಗಿ ಕೋವಿಡ್ ಔಷಧಿಗಳನ್ನು ವಿತರಿಸಲಾಗುತ್ತಿದೆ ಎಂದರು.
ಕೇರಳವನ್ನು ರಾಷ್ಟ್ರದಲ್ಲೇ ನಂ.1 ರಾಜ್ಯವಾಗಿಸಲು ಮೋದಿಯವರ ನೇತೃತ್ವದ ಎನ್.ಡಿ.ಎ ಸರ್ಕಾರಕ್ಕೆ ಸಾಧ್ಯವಾಗುವುದೆಂದು ಭರವಸೆ ನೀಡುವೆ. ಕೇರಳವನ್ನು ಸ್ವಾವಲಂಬಿ ರಾಜ್ಯವಾಗಿಸಲು ನಿಮೆಲ್ಲರ ಸಹಾಯ ಬೇಕು ಎಂದು ಅಮಿತ್ ಶಾ ವಿನಂತಿಸಿದರು.
ಕೇಂದ್ರ ಸಚಿವ ವಿ.ಮುರಳೀಧರನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಸುರೇಶ್ ಗೋಪಿ, ಇ.ಶ್ರೀಧರನ್,ಪ್ರಹ್ಲಾದ್ ಜೋಶಿ, ಕರ್ನಾಟಕ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಶಾಸಕ ಒ.ರಾಜಗೋಪಾಲ್ ಸಹಿತ ರಾಷ್ಟ್ರ, ರಾಜ್ಯ ನಾಯಕರು ಉಪಸ್ಥಿತರಿದ್ದರು.







