ನವದೆಹಲಿ: ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗುತ್ತಿದ್ದಾರೆ. ಇವುಗಳ ದರ ಇಳಿಸುವುದು ಹೇಗಪ್ಪಾ ಎಂದು ಕೇಂದ್ರ ಸರ್ಕಾರ ತಲೆ ಮೇಲೆ ಕೈ ಹೊತ್ತು ಕೂತಿದೆ. ಆದರೆ ಬೆಲೆ ಮಾತ್ರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲಿದೆ.
ಬೆಲೆ ಏರಿಕೆ ತಗ್ಗಿಸಲು ಹೊಸ ಉಪಾಯ ಹೇಳಿರುವ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ಅವರು ಪೆಟ್ರೋಲಿಯಂ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ಜಿಎಸ್ಟಿ ವ್ಯಾಪ್ತಿಯಲ್ಲಿ ತರಬೇಕು ಎಂದು ಹೇಳಿದ್ದಾರೆ. ಆದರೆ, ಈ ನಿರ್ಧಾರವನ್ನು ಜಿಎಎಸ್ಟಿ ಕೌನ್ಸಿಲ್ ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಜಿಎಸ್ಟಿ ಕೌನ್ಸಿಲ್ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಅದೊಂದು ಅತ್ಯುತ್ತಮ ಬೆಳವಣಿಗೆ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒತ್ತಾಯಿಸಿದ್ದರು. ಅದಾಗ್ಯೂ ಏಪ್ರೀಲ್ ನಂತರ ತೈಲ ಬೆಲೆಯಲ್ಲಿ ಇಳಿಕೆ ಕಾಣಲಿದೆ ಎಂದು ಪ್ರಧಾನ್ ನಿನ್ನೆ ಹೇಳಿದ್ದಾರೆ.






