ವಾಷಿಂಗ್ಟನ್: ಭಾರತದ ಅನುಮತಿ ಪಡೆಯದೆಯೇ ಲಕ್ಷದ್ವೀಪದ ದ್ವೀಪಗಳ ಬಳಿ ಅಮೆರಿಕ ನೌಕಾಪಡೆಯು 'ಸ್ವತಂತ್ರ ಸಂಚಾರದ ಕಾರ್ಯಾಚರಣೆ'ಯನ್ನು (ಎಫ್‌ಒಎನ್‌ಒಪಿ) ಬುಧವಾರ ಕೈಗೊಂಡಿತ್ತು.
ಕ್ಷಿಪಣಿಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರುವ 'ಯುಎಸ್‌ಎಸ್ ಜಾನ್ ಪೌಲ್ ಜಾನ್ಸ್' ಯುದ್ಧ ಹಡಗಿನ ಮೂಲಕ ಏಪ್ರಿಲ್ 7ರಂದು ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಅಮೆರಿಕ ನೌಕಾಪಡೆಯ 'ಸೆವೆಂಥ್ ಫ್ಲೀಟ್' ಕಮಾಂಡರ್ ಪ್ರಕಟಣೆ ತಿಳಿಸಿದೆ.
'ಲಕ್ಷದ್ವೀಪದಿಂದ ಸುಮಾರು 130 ನಾಟಿಕಲ್ ಮೈಲುಗಳಷ್ಟು ದೂರದ ಪಶ್ಚಿಮದ ದ್ವೀಪಗಳಲ್ಲಿ ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಭಾರತದ ಪೂರ್ವಾನುಮತಿ ಇಲ್ಲದೆಯೇ ಯುಎಸ್‌ಎಸ್ ಜಾನ್ ಪೌಲ್ ಜಾನ್ಸ್ (ಡಿಡಿಜಿ 53) ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಅಂತರರಾಷ್ಟ್ರೀಯ ಕಾನೂನಿನ ಅನ್ವಯವೇ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ' ಎಂದು ತಿಳಿಸಿದೆ.
ಅಮೆರಿಕ ಪಡೆಗಳು ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಪ್ರತಿ ದಿನವೂ ಕಾರ್ಯಾಚರಣೆ ನಡೆಸುತ್ತವೆ. ಅಂತರರಾಷ್ಟ್ರೀಯ ಕಾನೂನಿನ ಅನ್ವಯವೇ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಅಂತರರಾಷ್ಟ್ರೀಯ ಕಾನೂನು ಅವಕಾಶ ನೀಡುವ ಸ್ಥಳಗಳಲ್ಲಿ ಅಮೆರಿಕ ಕಾರ್ಯಾಚರಣೆ ಕೈಗೊಳ್ಳುತ್ತದೆ ಎಂದು ಅಮೆರಿಕ ತಿಳಿಸಿದೆ.
'ಈ ಹಿಂದೆಯೂ ಇದೇ ರೀತಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಭವಿಷ್ಯದಲ್ಲಿಯೂ ಕೈಗೊಳ್ಳಲಾಗುವುದು. ಎಫ್‌ಒಎನ್‌ಒಪಿ ಕೇವಲ ಒಂದು ದೇಶಕ್ಕೆ ಸೀಮಿತವಾಗಿಲ್ಲ ಅಥವಾ ಯಾವುದೇ ರಾಜಕೀಯ ಹೇಳಿಕೆ ನೀಡಲು ಅಲ್ಲ' ಎಂದು ಹೇಳಿದೆ.
ವಿಶೇಷ ಆರ್ಥಿಕ ವಲಯ ಸೇನಾ ಅಭ್ಯಾಸ ಅಥವಾ ಯಾವುದೇ ರೀತಿಯ ಕಾರ್ಯಾಚರಣೆ ಕೈಗೊಳ್ಳುವ ಮುನ್ನ ಭಾರತದ ಪೂರ್ವಾನುಮತಿ ಪಡೆದುಕೊಳ್ಳುವುದು ಅಗತ್ಯವಿದೆ.
ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಅಮೆರಿಕದ ನೌಕಾಪಡೆಯು ಇಂತಹ ಕಾರ್ಯಾಚರಣೆ ಕೈಗೊಂಡಿರುವುದು ಇದೇ ಮೊದಲ ಬಾರಿ ಅಲ್ಲ. 2019ರಲ್ಲೂ ಇದೇ ರೀತಿಯ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆ ತಿಳಿಸಿದೆ.
ಅಂತರರಾಷ್ಟ್ರೀಯ ಕಾನೂನಿನ ಅನ್ವಯವೇ ಎಲ್ಲ ರಾಷ್ಟ್ರಗಳಿಗೂ ಅನ್ವಯಿಸುವ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಸಮುದ್ರದ ಬಳಕೆಯನ್ನು ಕಾಪಾಡುವ ಉದ್ದೇಶದಿಂದ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಅಮೆರಿಕ ಸಂಸತ್‌ಗೆ 2020ರ ಜುಲೈನಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿತ್ತು.





