ನವದೆಹಲಿ: ಎಟಿಎಂಗಳ ಮೇಲೆ ಹ್ಯಾಕರ್ಸ್‌ಗಳ “ಮ್ಯಾನ್ ಇನ್ ದಿ ಮಿಡಲ್’ (ಎಂಐಟಿಎಂ) ದಾಳಿ ಹೆಚ್ಚಾಗಿದ್ದು, ಗೂಢ ಲಿಪಿಕರಣ ಜಾಲದ ಮೂಲಕ ಎಟಿಎಂಗಳಲ್ಲಿ ಸುರಕ್ಷತಾ ಕ್ರಮ ಹೆಚ್ಚಿಸುವಂತೆ ಕೇಂದ್ರ ಸರ್ಕಾರ, ಎಲ್ಲ ಬ್ಯಾಂಕ್ ಗಳಿಗೆ ಸೂಚಿಸಿದೆ.
ಸೈಬರ್ ದಾಳಿ ಕೋರರು ಇತ್ತೀಚೆಗೆ “ಎಟಿಎಂ ಸ್ವಿಚ್’, “ಎಟಿಎಂ ಹಾಸ್ಟ್’ ಸಂದೇಶಗಳನ್ನು ಕಳುಹಿಸುವ ಮೂಲಕ ಎಂಐಟಿಎಂ ದಾಳಿಗಳನ್ನು ತೀವ್ರಗೊಳಿಸಿದ್ದಾರೆ. ಗ್ರಾಹಕ ಹಣ ತೆಗೆಯುತ್ತಿರುವಾಗಲೇ, ಅಜ್ಞಾತ ಸ್ಥಳದಲ್ಲಿ ಕುಳಿತ ಹ್ಯಾಕರ್ ನಗದನ್ನು ವಿಥ್‌ಡ್ರಾ ಮಾಡಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸರ್ಕಾರ ಆತಂಕ ಸೂಚಿಸಿದೆ.
“ಭದ್ರತಾ ಏಜೆನ್ಸಿಗಳು ಈ ಬಗ್ಗೆ ತನಿಖೆ ನಡೆಸಿವೆ. ಎಟಿಎಂನ ಲ್ಯಾನ್ ಕೇಬಲ್ ಗಳನ್ನು ಮೊದಲು ಹಾಳುಗೆಡವಿ, ಹ್ಯಾಕರ್ಸ್ ಗಳು ಈ ಕೃತ್ಯ ಎಸಗುತ್ತಿರುವುದು ಬೆಳಕಿಗೆ ಬಂದಿದೆ’ ಎಂದು ಸರ್ಕಾರ ಎಚ್ಚರಿಸಿದೆ. 2020ರಲ್ಲಿ ಒಟ್ಟು 2,90,445 ಸೈಬರ್ ವಂಚನೆ ಪ್ರಕರಣಗಳು ನಡೆದಿದ್ದು, ಫಿಶಿಂಗ್ ದಾಳಿ, ನೆಟ್ ವರ್ಕ್ ಸ್ಕ್ಯಾನಿಂಗ್, ವೈರಸ್ ಅಟ್ಯಾಕ್, ಎಂಐಟಿಎಂ, ವೆಬ್‌ಸೈಟ್ ಹ್ಯಾಕಿಂಗ್‌ಗಳೂ ಇದರಲ್ಲಿ ಸೇರಿವೆ.





