ಚೆನ್ನೈ: ಕರೊನಾವೈರಸ್ನ ಎರಡನೇ ಅಲೆ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ಜಗತ್ತಿನ ಗಮನ ಸೆಳೆದಿದೆ. ಜಗತ್ತಿನ ಎಲ್ಲ ದೇಶಗಳನ್ನೂ ಮೀರಿಸಿ ಪ್ರತಿದಿನ ಸರಾಸರಿ 3.5 ಲಕ್ಷ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿವೆ. ಇದರಿಂದ ದೇಶದಲ್ಲಿ ಅಘೋಷಿತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು, ಮಧ್ಯಪ್ರಾಚ್ಯ ರಾಷ್ಟ್ರಗಳು, ಅಮೆರಿಕ ಸೇರಿದಂತೆ ಅನೇಕ ದೇಶಗಳು ಭಾರತಕ್ಕೆ ಸಹಾನುಭೂತಿಯನ್ನು ತೋರಿಸಿವೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಇಂದು ಭಾರತದ ಕೋವಿಡ್ ಪರಿಸ್ಥಿತಿ ಅವಲೋಕಿಸಿ, 'ಹೆದರಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ನಿಮಗೆ ಬೇಕಾದ ಬೆಂಬಲ, ಸಹಕಾರವನ್ನು ನೀಡುತ್ತೇವೆ' ಎಂದು ಹೇಳಿದ್ದರು.
ನಿಕ್ ಬ್ಲಿಂಕೆನ್ ಹೇಳಿಕೆ ಉಲ್ಲೇಖಿಸಿ ಚೆನ್ನೈನ ಅಮೆರಿಕ ಕಾನ್ಸುಲೇಟ್ ಜನರಲ್ ಕಚೇರಿ (ರಾಯಭಾರ ಕಚೇರಿ) ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದಿದೆ. 'ತೀವ್ರವಾಗಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳ ನಡುವೆ ತೊಂದರೆ ಪಡುತ್ತಿರುವ ಭಾರತೀಯ ನಾಗರಿಕರ ಬಗ್ಗೆ ನಮಗೆ ಸಹಾನುಭೂತಿ ಇದೆ. ಕೋವಿಡ್ 19 ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ಭಾರತ ಸರ್ಕಾರದೊಡನೆ ಕೈ ಜೋಡಿಸಿ ಸಹಾಯ ನೀಡುತ್ತಿದ್ದೇವೆ. ಇನ್ನೂ ಹೆಚ್ಚುವರಿ ಬೆಂಬಲವನ್ನು ಕ್ಷೀಪ್ರವಾಗಿ ನಿಯೋಜಿಸುತ್ತೇವೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ನಿಕ್ ಬ್ಲಿಂಕೆನ್ ದೈರ್ಯ ನೀಡಿದ್ದಾರೆ' ಎಂದು ಟ್ವೀಟ್ ಮಾಡಿದೆ. ಅಲ್ಲದೇ ತಮಿಳು, ಮಲಯಾಳಿಯಲ್ಲೂ ಅಮೆರಿಕ ಕಾನ್ಸುಲೇಟ್ ಜನರಲ್ ಕಚೇರಿ ಟ್ವೀಟ್ ಮಾಡಿದೆ.





