ಆಲಪ್ಪುಳ: ವಿವಾಹ ದಿನ ನಿಗದಿಯಾದ ಬಳಿಕ ಸ್ಥಳೀಯರಿಗೆ ಮತ್ತು ಸಂಬಂಧಿಕರಿಗೆ ಆಮಂತ್ರಣವನ್ನೂ ನೀಡಿದ ಬಳಿಕ ಕೊರೋನಾ ಬಂದರೆ ಏನಾಗುತ್ತದೆ? ಅಲಪ್ಪುಳದಲ್ಲಿರುವ ಕೈನಕಾರಿ ಮೂಲದ ಶರತ್ ಸೋಮ ಮತ್ತು ಅಭಿರಾಮಿ ಅವರು ಕೊರೊನಾದಿಂದ ಗೆದ್ದು ಮುಂದೆ ಸುಲಲಿತ ಕುಟುಂಬ ಜೀವನ ಸಾಗಿಸುತ್ತೇವೆ ಎಂಬ ದೃಢತೆಯಿಂದ ಭಾನುವಾರ ವಿವಾಹವಾದರು.
ವಿಶೇಷವೆಂದರೆ ಅವರ ವಿವಾಹ ನಡೆದಿರುವುದು ಯಾವುದೇ ಸಭಾ ಭವನದಲ್ಲೋ, ಮನೆಯಲ್ಲೋ ಅಲ್ಲ. ಆಲಪ್ಪುಳ ವೈದ್ಯಕೀಯ ಕಾಲೇಜಿನ ಕೊರೋನಾ ವಾರ್ಡ್ ನಲ್ಲಿ! ನಿಗದಿತ ದಿನಾಂಕದಂದು ಇವರಿಗೆ ವಿವಾಹವಾಗಲು ಜಿಲ್ಲಾಡಳಿತ ಅನುಮತಿ ನೀಡಿದ ಬಳಿಕ ವೈದ್ಯಕೀಯ ಕಾಲೇಜು ವಿವಾಹ ಸಂಭ್ರಮದ ಕೇಂದ್ರವಾಗಿ ಗಮನ ಸೆಳೆಯಿತು.
ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಶರತ್ ವಿವಾಹಕ್ಕಾಗಿ ಇತ್ತೀಚೆಗೆ ಊರಿಗೆ ಮರಳಿದ್ದರು.ಹಿರಿಯರು, ಸಂಬಂಧಿಕರು ಏಪ್ರಿಲ್ 25 ರಂದು ವಿವಾಹ ದಿನಾಂಕ ನಿಶ್ಚಯಿಸಿದ್ದರು. ಈ ಮಧ್ಯೆ ಮೊದಲ ಕೋವಿಡ್ ಪರೀಕ್ಷೆಯಲ್ಲಿ ಶರತ್ ಅವರಿಗೆ ಋಣಾತ್ಮಕವಾಗಿತ್ತು. ಆದರೆ ವಿವಾಹದ ದಿನ ಸಮೀಪಿಸುತ್ತಿರುವಂತೆ ಶರತ್ ಗೆ ಕೊರೋನಾ ಸಕಾರಾತ್ಮಕವಾಗಿ ದೃಢಪಡಿಸಲಾಯಿತು. ಶರತ್ ಅವರ ತಾಯಿ ಜಿಜಿ ಅವರಿಗೂ ಬಳಿಕ ವೈರಸ್ ಧನಾತ್ಮಕವಾಯಿತು. ಶರತ್ ಮತ್ತು ಅವರ ತಾಯಿ ಆಲಪ್ಪುಳ ವೈದ್ಯಕೀಯ ಕಾಲೇಜಿನ ಕೊರೋನಾ ವಾರ್ಡ್‍ಗೆ ದಾಖಲಾದರು.
ಇದರೊಂದಿಗೆ, ವಧು-ವರರ ಸಂಬಂಧಿಕರು ಈಗಾಗಲೇ ಮಾಡಲಾಗಿದ್ದ ವ್ಯವಸ್ಥೆಗಳಂತೆ ವಿವಾಹವನ್ನು ನಡೆಸಲು ನಿರ್ಧರಿಸಿದರು. ಈ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆಯಲಾಯಿತು.
ವಧು ಮತ್ತು ಸಂಬಂಂಧಪಟ್ಟವರು ಭಾನುವಾರ ವಿವಾಹ ಮುಹೂರ್ತದ ಹೊತ್ತಿಗೆ ಪಿಪಿಇ ಕಿಟ್ ಧರಿಸಿ ವಾರ್ಡ್ ಗೆ ಆಗಮಿಸಿದರು. ಸಿಬ್ಬಂದಿ ಸಿದ್ಧಪಡಿಸಿದ ಸ್ಥಳದಲ್ಲಿ ಶರತ್- ಅಭಿರಾಮಿ ಅವರಿಗೆ ಕರಿಮಣಿಯನ್ನೂ ಕಟ್ಟಿದರು. ಶರತ್ ಅವರ ತಾಯಿ ಮತ್ತು ಮಾವ ಮಾತ್ರ ಈ ಸಂದರ್ಭ ಉಪಸ್ಥಿತರಿದ್ದರು. ಶರತ್ ಅವರ ತಂದೆ, ಅಜ್ಜಿ ಮತ್ತು ಸಹೋದರಿಯರು ಕೋವಿಡ್ ನಿಯಮಾನುಸಾರ ಮನೆಯಿಂದಲೇ ಶುಭಹಾರೈಸಿದರು. ಈ ಮೂಲಕ ಕೊರೊನಾ ಕಾಲದ ವಿಶಿಷ್ಟ ವಿವಾಹ ಗಮನ ಸೆಳೆಯಿತು.





