ನವದೆಹಲಿ: ದೇಶದ ಜನರಲ್ಲಿ ಮಾರ್ಚ್ ವೇಳೆಗೆ ಕೋವಿಡ್ ಪ್ರತಿಕಾಯದ ಸಾಮರ್ಥ್ಯ ಕುಂದಿದ್ದೇ ಕೋವಿಡ್ ಮತ್ತಷ್ಟು ತೀವ್ರವಾಗಿ ಹರಡಲು ಕಾರಣ ಎಂಬುದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತು (ಸಿಎಸ್‌ಐಆರ್) ನಡೆಸಿದ ಸೆರೊ ಸಮೀಕ್ಷೆಯಲ್ಲಿ ಪತ್ತೆಯಾಗಿದೆ.
ಸಿಎಸ್‌ಐಆರ್ ದೇಶದ ವಿವಿಧ ನಗರಗಳಲ್ಲಿ ಇರುವ ತನ್ನ 40 ಪ್ರಯೋಗಾಲಯಗಳ ಸಿಬ್ಬಂದಿ, ಗುತ್ತಿಗೆ ನೌಕರರ ಮೇಲೆ ಸೆರೊ ಸಮೀಕ್ಷೆ ನಡೆಸಿತ್ತು. ಒಟ್ಟು 10,427 ಜನರು ಈ ಸಮೀಕ್ಷೆಗೆ ಒಳಪಟ್ಟಿದ್ದರು.
ಭಾರತದಲ್ಲಿ 2020ರ ಸೆಪ್ಟೆಂಬರ್ ವೇಳೆಗೆ ಕೋವಿಡ್ ತೀವ್ರವಾಗಿತ್ತು. ಆ ವೇಳೆಗೆ ಪದೇ ಪದೇ ಸಂಪರ್ಕಕ್ಕೆ ಬರುತ್ತಿದ್ದ ಕಾರ್ಮಿಕ ವರ್ಗ, ಆರೋಗ್ಯ ಸೇವಾ ಸಿಬ್ಬಂದಿ, ಪ್ರತಿನಿತ್ಯ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವವರಲ್ಲಿ ಕೋವಿಡ್ ಪ್ರತಿಕಾಯವು ಅಭಿವೃದ್ಧಿಯಾಗಿತ್ತು. ಹೀಗಾಗಿಯೇ ಸೆಪ್ಟೆಂಬರ್ ನಂತರ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಸೆಪ್ಟೆಂಬರ್‌ನಲ್ಲಿ ಹತ್ತಾರು ಕೋಟಿ ಜನರಿಗೆ ಕೋವಿಡ್ ತಗುಲಿದೆ ಎಂದು ಹಲವು ಸೆರೊ ಸಮೀಕ್ಷೆಗಳು ಹೇಳಿದ್ದವು. ಈ ಜನರಲ್ಲಿ ಪ್ರತಿಕಾಯ ಅಭಿವೃದ್ಧಿಯಾಗಿ, ಅವು ಪ್ರಬಲವಾಗಿರುವವರೆಗೂ ಕೋವಿಡ್ ಹರಡುವುದು ನಿಧಾನವಾಯಿತು. ಹೀಗಾಗಿಯೇ ಕೋವಿಡ್ ತಗುಲಿದವರೂ ಬೇಗ ಗುಣಮುಖರಾದರು. ಈ ಪ್ರತಿಕಾಯವು 5-6 ತಿಂಗಳು ಮಾತ್ರ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿದ್ದವು. ಸೆಪ್ಟೆಂಬರ್‌ನಿಂದ 2021ರ ಮಾರ್ಚ್‌ವರೆಗೂ ಕೋವಿಡ್ ನಿಯಂತ್ರದಲ್ಲಿ ಇತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆದರೆ, ಈ ಪ್ರತಿಕಾಯವು ಬಹುತೇಕ ಮಂದಿಯಲ್ಲಿ 5-6 ತಿಂಗಳಲ್ಲೇ ತನ್ನ ಬಲವನ್ನು ಕಳೆದುಕೊಂಡಿತ್ತು. ಇದು ಸೆರೊ ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಹೀಗೆ ಕೊರೊನಾವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ ಸಾಮರ್ಥ್ಯ ದುರ್ಬಲವಾದ ಕಾರಣದಿಂದಲೇ, ಈ ವರ್ಗದ ಜನರಲ್ಲಿ ಕೋವಿಡ್ ಹರಡಿತು ಎಂದು ಸೆರೊ ಸಮೀಕ್ಷೆಯ ವರದಿಯಲ್ಲಿ ವಿವರಿಸಲಾಗಿದೆ.
'ಧೂಮಪಾನಿಗಳು, ಸಸ್ಯಾಹಾರಿಗಳಿಂದ ಕೊರೊನಾ ದೂರ'
ಧೂಮಪಾನ ಮಾಡುವವರು ಮತ್ತು ಸಸ್ಯಾಹಾರಿಗಳು ಕೋವಿಡ್‌ಗೆ ಬಾಧಿತರಾಗುವ ಸಾಧ್ಯತೆ ಕಡಿಮೆ ಇದೆ ಎಂದು ಈ ಅಧ್ಯಯನದಲ್ಲಿ ಪತ್ತೆಯಾಗಿದೆ. ಧೂಮಪಾನದಿಂದ ಆರೋಗ್ಯಕ್ಕೆ ಹಾನಿಯಾದರೂ, ಕೋವಿಡ್ ವಿರುದ್ಧ ಇದು ರಕ್ಷಾಕವಚದಂತೆ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ ಎಂದು ಸಿಎಸ್‌ಐಆರ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಧೂಮಪಾನದಿಂದ ಶ್ವಾಸಕೋಶದ ಒಳಮೈಯಲ್ಲಿ ಲೋಳೆಯ ಉತ್ಪಾದನೆಯಾಗುವುದರಿಂದ ವೈರಾಣು ಶ್ವಾಸಕೋಶದ ಒಳಸೇರದಂತೆ ತಡೆಯುತ್ತಿರಬಹುದು. ಆದರೆ ಈ ಬಗ್ಗೆ ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ' ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ 14ರಷ್ಟು ಜನರು ಧೂಮಪಾನಿಗಳು. ಆದರೆ ಕೋವಿಡ್ ರೋಗಿಗಳಲ್ಲಿ ಧೂಮಪಾನಿಗಳ ಪ್ರಮಾಣ ಶೇ 1.3ರಷ್ಟು ಮಾತ್ರ. ಬ್ರಿಟನ್‌ನ ಒಟ್ಟು ಜನಸಂಖ್ಯೆಯಲ್ಲಿ ಧೂಮಪಾನಿಗಳ ಪ್ರಮಾಣ ಶೇ 28ರಷ್ಟು. ಆದರೆ ಕೋವಿಡ್ ರೋಗಿಗಳಲ್ಲಿ ಈ ಪ್ರಮಾಣ ಶೇ 5ರಷ್ಟು ಮಾತ್ರ. ಇದೇ ರೀತಿ ಫ್ರಾನ್ಸ್‌ನಲ್ಲಿ ಶೇ 32ರಷ್ಟು ಜನರು ಧೂಮಪಾನಿಗಳಿದ್ದಾರೆ. ಆದರೆ ಒಟ್ಟು ಕೋವಿಡ್ ರೋಗಿಗಳಲ್ಲಿ ಇವರ ಪ್ರಮಾಣ ಶೇ 7.1ರಷ್ಟು ಮಾತ್ರ. ಚೀನಾದಲ್ಲಿ ಶೇ 50ಕ್ಕೂ ಹೆಚ್ಚು ಜನರು ಧೂಮಪಾನಿಗಳು. ಆದರೆ ಕೋವಿಡ್ ರೋಗಿಗಳಲ್ಲಿ ಧೂಮಪಾನಿಗಳ ಪ್ರಮಾಣ ಶೇ 3.3ರಷ್ಟು ಮಾತ್ರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಒ' ಗುಂಪಿನ ರಕ್ತದವರಿಗೆ ಕೋವಿಡ್ ತಗಲುವ ಸಾಧ್ಯತೆ ಕಡಿಮೆ. ಆದರೆ 'ಬಿ' ಮತ್ತು 'ಎಬಿ' ಗುಂಪಿನ ರಕ್ತದವರಿಗೆ ಕೋವಿಡ್ ತಗಲುವ ಸಾಧ್ಯತೆ ಅತ್ಯಧಿಕ ಎಂದು ವರದಿಯಲ್ಲಿ ಹೇಳಲಾಗಿದೆ.
ಸಸ್ಯಾಹಾರದಲ್ಲಿ ನಾರಿನ ಅಂಶ ಹೆಚ್ಚು. ಇದು ಕೋವಿಡ್ ವಿರುದ್ಧದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿದೆ.





