ತಿರುವನಂತಪುರ: ರಾಜ್ಯದಲ್ಲಿ ಬುಧವಾರದಿಂದ ನಡೆಯಬೇಕಿದ್ದ ಹೈಯರ್ ಸೆಕೆಂಡರಿ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕೊರೋನಾ ವಿಸ್ತರಣೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದೂಡಲ್ಪಟ್ಟ ಪರೀಕ್ಷೆಗಳಿಗೆ ಹೊಸ ದಿನಾಂಕವನ್ನು ಬಳಿಕ ಪ್ರಕಟಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಕೊರೋನಾ ವಿಸ್ತರಣೆಯ ತೀವ್ರತೆಗೆ ಅನುಗುಣವಾಗಿ ಮೇ ತಿಂಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುವುದು ಎಂಬುದು ಪ್ರಸ್ತುತ ಅಂದಾಜಿಸಲಾಗುತ್ತಿದೆ. ಆದಾಗ್ಯೂ, ಸೋಂಕು ಹರಡುವಿಕೆಯು ಮುಂದುವರಿದರೆ, ಪರೀಕ್ಷೆಗಳನ್ನು ಸಂಪೂರ್ಣವಾಗಿ ಕೈಬಿಡುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಅದರ ಬದಲಿಗೆ ಲಿಖಿತ ಪರೀಕ್ಷೆಯ ಸರಾಸರಿಯನ್ನು ಲೆಕ್ಕಹಾಕುವ ಮೂಲಕ ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ನಿರ್ಧರಿಸಬಹುದಾಗಿದೆ.
ಈ ಹಿಂದೆ ಶಿಕ್ಷಕರ ಸಂಘಗಳು ಪರೀಕ್ಷೆಗಳನ್ನು ಮುಂದೂಡಬೇಕೆಂದು ಒತ್ತಾಯಿಸಿತ್ತು. ಈ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿತ್ತು. ಶಿಕ್ಷಣ ನಿರ್ದೇಶಕರು ಇಂದು ಮಾನವ ಹಕ್ಕುಗಳ ಆಯೋಗಕ್ಕೆ ಮಾಹಿತಿ ನೀಡಲಿದ್ದಾರೆ. ಹೈಯರ್ ಸೆಕೆಂಡರಿ ಮತ್ತು ಪೊಕೇಶನಲ್ ಹೈಯರ್ ಸೆಕೆಂಡರಿ ಥಿಯರಿ ಪರೀಕ್ಷೆಗಳು ಇಂದು ಪೂರ್ಣಗೊಳ್ಳುತ್ತಿವೆ.





