ಕೊಚ್ಚಿ: ಸರ್ಕಾರಿ ಆಸ್ಪತ್ರೆಗಳ ಒಪಿ ಪ್ರವೇಶ ಪರವಾನಿಗೆ(ಟಿಕೆಟ್)ಗಳು ಇನ್ನು ಅಕ್ಷಯ ಕೇಂದ್ರದಲ್ಲಿ ಕಾಯ್ದಿರಿಸಬಹುದಾಗಿದೆ. ಇ-ಆರೋಗ್ಯ ಯೋಜನೆಯ ಭಾಗವಾಗಿ ಅಕ್ಷಯ ಕೇಂದ್ರಗಳನ್ನು ಒಪಿ ಟಿಕೆಟ್ ಕೇಂದ್ರಗಳಾಗಿ ಪರಿವರ್ತಿಸಲಾಗುವುದು. ಹೊಸ ವ್ಯವಸ್ಥೆ ಶೀಘ್ರದಲ್ಲೇ ರಾಜ್ಯದಲ್ಲಿ ಜಾರಿಗೆ ಬರಲಿದೆ.
ಒಪಿ ಟಿಕೆಟ್‍ಗಳನ್ನು ಮನೆಯಿಂದ ಕಾಯ್ದಿರಿಸಬಹುದಾದ ಇ-ಹೆಲ್ತ್ ಯೋಜನೆಯನ್ನು ಪಡೆಯಲು ಸಾಧ್ಯವಾಗದವರಿಗೆ ಇದು ನೆರವಾಗಲಿದೆ. ಸ್ವಂತ ಮೊಬೈಲ್ ಫೆÇೀನ್, ಕಂಪ್ಯೂಟರ್ ಅಥವಾ ಆನ್‍ಲೈನ್ ವ್ಯವಸ್ಥೆ ಉಪಯೋಗಿಸಲು ಸಾಧ್ಯವಾಗದ ಜನರಿಗೆ ಸಹಾಯ ಮಾಡಲು ಅಕ್ಷಯ ಕೇಂದ್ರಗಳಲ್ಲಿ ಇಂತಹ ವ್ಯವಸ್ಥೆ ಮಾಡಲಾಗುತ್ತದೆ.
ವೈಯಕ್ತಿಕ ಮಾಹಿತಿಯನ್ನು ಆಧಾರ್ ಗೆ ಜೋಡಿಸುವ ಮೂಲಕ ಇ-ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಮೂಲಕ ಪಡೆದ ಗುರುತಿನ ಸಂಖ್ಯೆಯನ್ನು ಬಳಸಿಕೊಂಡು ಒಪಿ ಟಿಕೆಟ್ ಬುಕಿಂಗ್ ಸಾಧ್ಯವಾಗಲಿದೆ. ರೋಗಿಯು ಬುಕಿಂಗ್ ನಲ್ಲಿ ನಮೂದಾದ ಸಮಯಕ್ಕೆ ಮಾತ್ರ ಆಸ್ಪತ್ರೆಗೆ ತೆರಳಿದರೆ ಸಾಕಾಗುತ್ತದೆ.
ಹೊಸ ವ್ಯವಸ್ಥೆಯು ರೋಗಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಂದೇ "ಕ್ಲಿಕ್" ನಲ್ಲಿ ತಿಳಿಯಲು ಅನುಮತಿಸುತ್ತದೆ. ರೋಗಿಗೆ ಯಾವ ರೋಗಲಕ್ಷಣಗಳಿವೆ ಮತ್ತು ಪ್ರಸ್ತುತ ಯಾವ ಔಷಧಿಗಳನ್ನು ಬಳಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಲು ವೈದ್ಯರಿಗೆ ಇದು ನೆರವಾಗುತ್ತದೆ.





