ಕಣ್ಣೂರು: ಕೋವಿಡ್ ಬಿಕ್ಕಟ್ಟು ಮತ್ತೆ ಉಲ್ಬಣಗೊಳ್ಳುವುದರೊಂದಿಗೆ, ರಾಜ್ಯದಲ್ಲಿ ಹೆಚ್ಚಿನ ಭಾರೀ ನಿಯಂತ್ರಣಗಳ ಸಾಧ್ಯತೆ ಇದೆ. ಲಾಕ್ ಡೌನ್ ಹೊರತುಪಡಿಸಿ ಕಠಿಣ ನಿರ್ಬಂಧಗಳಿಗೆ ಪರಿಸ್ಥಿತಿ ಸಿದ್ಧತೆ ನಡೆಸುತ್ತಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತುರ್ತು ಪರಿಸ್ಥಿತಿಯನ್ನು ನಿರ್ಣಯಿಸಲು ಉನ್ನತ ಮಟ್ಟದ ಸಭೆಯೊಂದನ್ನು ಇಂದು ಕರೆದಿರುವರು. ಇಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ.
ಜಿಲ್ಲಾಧಿಕಾರಿಗಳು, ಪೋಲೀಸ್ ಮುಖ್ಯಸ್ಥರು ಮತ್ತು ಡಿಎಂಒಗಳು ಉಪಸ್ಥಿತರಿರುತ್ತಾರೆ. ಶುಕ್ರವಾರ ಮತ್ತು ಶನಿವಾರ ರಾಜ್ಯದಲ್ಲಿ ಸಾಮೂಹಿಕ ಕೋವಿಡ್ ತಪಾಸಣೆ ನಡೆಸಲು ನಿರ್ಧರಿಸಲಾಗುವುದು. ಚುನಾವಣಾ ಹಿನ್ನೆಲೆಯಲ್ಲಿ ಭಾಗವಹಿಸಿದವರನ್ನು ಗುರಿಯಾಗಿರಿಸಿ ಈ ತಪಾಸಣೆ ನಡೆಯಲಿದೆ.
ಎರ್ನಾಕುಳಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿರ್ಣಾಯಕವಾಗಿದೆ. ಎರಡೂ ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.
ಬುಧವಾರ ರಾಜ್ಯದಲ್ಲಿ 8,778 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸಂಪರ್ಕದ ಮೂಲಕ 7,905 ಜನರಿಗೆ ಸೋಂಕು ತಗಲಿದೆ. ಪರೀಕ್ಷಾ ಸಕಾರಾತ್ಮಕ ದರಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. 65,258 ಮಾದರಿಗಳನ್ನು ಪರೀಕ್ಷಿಸಿದಾಗ, ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ 13.45 ಶೇ. ಆಗಿತ್ತು.
ಜೊತೆಗೆ 22 ಮಂದಿ ಕೋವಿಡ್ ಕಾರಣ ಮೃತಪಟ್ಟಿದ್ದಾರೆ. ಇದು ರಾಜ್ಯದಲ್ಲಿ ಒಟ್ಟು ಕೋವಿಡ್ ಸಾವುಗಳ ಸಂಖ್ಯೆಯನ್ನು 4,836 ಕ್ಕೆ ಏರಿಸಿದೆ.





