ತಿರುವನಂತಪುರ: ಕೇರಳದ 15ನೇ ವಿಧಾನಸಭೆಯ ಮೊದಲ ಅಧಿವೇಶನ ಇಂದು ಪ್ರಾರಂಭವಾಗಿದೆ. ಶಾಸಕರ ಪ್ರಮಾಣ ವಚನದೊಂದಿಗೆ ಅಧಿವೇಶನ ಪ್ರಾರಂಭವಾಯಿತು. ಪ್ರಮಾಣವಚನ ಸಮಾರಂಭವನ್ನು ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ನಡೆಸಲಾಗುತ್ತದೆ. ಹಂಗಾಮಿ ಸ್ಪೀಕರ್ ಕುನ್ನಮಂಗಲಂ ಶಾಸಕ ಪಿಟಿಎ ರಹೀಮ್ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.
ಸಚಿವರಾದ ಅಹ್ಮದ್ ದೇವರ್ಕೋವಿಲ್, ಜಿ.ಆರ್ ಅನಿಲ್, ಆಂಟನಿ ರಾಜು, ಕೆ.ಎನ್.ಬಾಲಗೋಪಾಲ್, ಆರ್ ಬಿಂದು, ಜೆ.ಚಿಂಚುರಾಣಿ, ಎಂ.ವಿ.ಗೋವಿಂದನ್ ಮತ್ತು ಪಿಎ.ಎ ಮೊಹಮ್ಮದ್ ರಿಯಾಜ್ ಪ್ರಮಾಣ ವಚನ ಸ್ವೀಕರಿಸಿದರು.
ಪ್ರತಿಪಕ್ಷದ ಹಿರಿಯ ಮುಖಂಡ ಪಿ.ಜೆ.ಜೋಸೆಫ್ ಪ್ರಮಾಣ ವಚನ ಸ್ವೀಕರಿಸಿದರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನಸೆಳೆದರು. ಎಂಟನೇ ಬಾರಿಗೆ ವಿಧಾನಸಭೆಯಲ್ಲಿರುವ ಮುಸ್ಲಿಂ ಲೀಗ್ ಮುಖಂಡ ಪಿ.ಕೆ.ಕುನ್ಹಾಲಿಕುಟ್ಟಿ ಕೂಡ ಪ್ರಮಾಣ ವಚನ ಸ್ವೀಕರಿಸಿದರು.
ನಾಳೆ ಸ್ಪೀಕರ್ ಆಯ್ಕೆ ನಡೆಯಲಿದೆ. ಮಂಗಳವಾರ ಮಧ್ಯಾಹ್ನದವರೆಗೆ ನಾಮಪತ್ರ ಸಲ್ಲಿಸಬಹುದು. ತ್ರಿತಲಾ ಶಾಸಕ ಎಂಬಿ ರಾಜೇಶ್ ಅವರು ಎಲ್ಡಿಎಫ್ ಸ್ಪೀಕರ್ ಅಭ್ಯರ್ಥಿ. ಕುಂಡರದ ಶಾಸಕ ಪಿಸಿ ವಿಷ್ಣುನಾಥ್ ಯುಡಿಎಫ್ ಸ್ಪೀಕರ್ ಅಭ್ಯರ್ಥಿಗಳಾಗಿದ್ದಾರೆ.
ಮೇ. 26 ಮತ್ತು 27 ರಂದು ಅಧಿವೇಶನ ನಡೆಯುವುದಿಲ್ಲ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ 28 ರಂದು ಸರ್ಕಾರದ ನೀತಿಯನ್ನು ಪ್ರಕಟಿಸಲಿದ್ದಾರೆ. ಹಿಂದಿನ ಸರ್ಕಾರದ ಕೊನೆಯ ನೀತಿ ಪ್ರಕಟಣೆ ಜನವರಿಯಲ್ಲಿ ನಡೆದಿತ್ತು. ಎರಡನೇ ಪಿಣರಾಯಿ ಸರ್ಕಾರದ ಬಜೆಟ್ ಜೂನ್ 4 ರಂದು ಮಂಡಿಸಲಾಗುವುದು. ಪರಿಷ್ಕೃತ ಬಜೆಟ್ ಅನ್ನು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಮಂಡಿಸಲಿದ್ದಾರೆ.









