HEALTH TIPS

ಬ್ಲಾಕ್ ಫಂಗಸ್: ಕೋವಿಡ್-19 ನಿಂದ ಚೇತರಿಸಿಕೊಂಡವರಲ್ಲಿ ಕಾಣಿಸುತ್ತಿದೆ ಮತ್ತೊಂದು ಆರೋಗ್ಯ ಸಮಸ್ಯೆ

              ನವದೆಹಲಿ: ಒಂದೆಡೆ ಕೋವಿಡ್-19 ಸೋಂಕು ಹರಡುವ ಭೀತಿ ಮೂಡಿದ್ದರೆ, ಕೋವಿಡ್-19 ನಿಂದ ಚೇತರಿಸಿಕೊಂಡರೂ ಅದು ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗೆಗಿನ ಆತಂಕ ಮತ್ತೊಂದೆಡೆ ಜನರನ್ನು ಎಡೆಬಿಡದೇ ಕಾಡುತ್ತಿದೆ.


          ಕೋವಿಡ್-19 ನಿಂದ ಚೇತರಿಸಿಕೊಂಡವರಲ್ಲಿ ಮ್ಯೂಕೋರ್ಮೈಕೋಸಿಸ್ ಎಂಬ ಫಂಗಲ್ ಸೋಂಕು (ಬ್ಲಾಕ್ ಫಂಗಲ್ ಎಂದೂ ಹೇಳುತ್ತಾರೆ) ಕಾಣಿಸಿಕೊಂಡು ಮೆದುಳು, ಕಣ್ಣುಗಳ ಮೇಲೆ ಪರಿಣಾಮ ಬೀರಿ ದೃಷ್ಟಿಹೀತನೆ ಅಥವಾ ಪ್ರಾಣಕ್ಕೇ ಕುತ್ತಾಗುವ ಅಪಾಯ ಉಂಟುಮಾಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

          ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮ್ಯೂಕೋರ್ಮೈಕೋಸಿಸ್ ಫಂಗಲ್ ಸೋಂಕು ದೃಷ್ಟಿ ಹೀನತೆ ಹಾಗೂ ಜೀವಕ್ಕೆ ಅಪಾಯಕಾರಿಯಾಗಿದ್ದು, ಇದನ್ನು ನಿವಾರಿಸುವ ಚಿಕಿತ್ಸೆಯೂ ದುಬಾರಿಯಾಗಿರುವುದು ಮತ್ತೊಂದು ಆತಂಕದ ಅಂಶ ಎನ್ನುತ್ತಾರೆ ವೈದ್ಯರು

ಸೂರತ್ ಮೂಲದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಮಾತುರ್ ಸಾವನಿ ಈ ಬಗ್ಗೆ ಮಾಹಿತಿ ನೀಡಿದ್ದು, ಸೂರತ್ ಜಿಲ್ಲೆ ಹಾಗೂ ಗುಜರಾತ್ ನ ಇತರ ಭಾಗದಿಂದ ಕೋವಿಡ್-19 ನಿಂದ ಚೇತರಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ 50 ಕ್ಕೂ ಹೆಚ್ಚು ಮಂದಿಗೆ ಮ್ಯೂಕೋರ್ಮೈಕೋಸಿಸ್ ಗೆ ಚಿಕಿತ್ಸೆ ನೀಡಲಾಗುತ್ತಿದೆ ಇನ್ನೂ 60 ಮಂದಿ ಚಿಕಿತ್ಸೆ ಪಡೆಯಲು ಕಾಯುತ್ತಿದ್ದಾರೆ. ಇವರೆಲ್ಲರೂ ನಮ್ಮ ಆಸ್ಪತ್ರೆಗೆ ಕಳೆದ ಮೂರು ವಾರಗಳಲ್ಲಿ ಬಂದಿದ್ದರು, ಕೋವಿಡ್-19 ನಿಂದ ಚೇತರಿಕೆ ಕಂಡವರಾಗಿದ್ದಾರೆ ಎಂದು ಸಾವನಿ" ಹೇಳಿದ್ದಾರೆ.

         ಇದಕ್ಕಾಗಿ ಪ್ರತ್ಯೇಕವಾದ ಸೌಲಭ್ಯವನ್ನೇ ಸೂರತ್ ಆಸ್ಪತ್ರೆ ಪ್ರಾರಂಭಿಸಿದೆ ಎಂದು ಉಸ್ತುವಾರಿ ರೆಸಿಡೆಂಟ್ ವೈದ್ಯಾಧಿಕಾರಿ ಡಾ. ಕೇತನ್ ನಾಯ್ಕ್ ತಿಳಿಸಿದ್ದಾರೆ.

         ಅಹ್ಮದಾಬಾದ್ ನಲ್ಲಿ ಕನಿಷ್ಟ 5 ಮ್ಯೂಕೋರ್ಮೈಕೋಸಿಸ್ ರೋಗಿಗಳು ದಿನವೊಂದಕ್ಕೆ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ಕೋವಿಡ್-19 ಎರಡನೇ ಅಲೆ ಪ್ರಾರಂಭವಾದ ಬಳಿಕ ದಿನವೊಂದಕ್ಕೆ 5-10 ಮಂದಿ ಮ್ಯೂಕೋರ್ಮೈಕೋಸಿಸ್ ನ ಕಾರಣದಿಂದಾಗಿ ಚಿಕಿತ್ಸೆ ಪಡೆಯುವುದಕ್ಕೆ ಬರುತ್ತಿದ್ದಾರೆ ಎಂದು ಇಎನ್ ಟಿ ತಜ್ಞ ಡಾ.ದೇವಾಂಗ್ ಗುಪ್ತ ಹೇಳಿದ್ದಾರೆ.

        ಕೋವಿಡ್-19 ನಿಂದ ಚೇತರಿಕೆ ಕಂಡವರು ಮ್ಯೂಕೋರ್ಮೈಕೋಸಿಸ್ ನಿಂದ ಮೃತಪಟ್ಟಿರುವ 8 ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು, 200 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯದ ಮುಖ್ಯಸ್ಥ ಡಾ. ತಾತ್ಯರಾವ್ ಲಹಾನೆ ಹೇಳಿದ್ದಾರೆ.

       "ಅವರೆಲ್ಲರೂ ಕೋವಿಡ್-19 ನಿಂದ ಚೇತರಿಕೆ ಕಂಡರು, ಆದರೆ ಅವರಲ್ಲಿ ಕಡಿಮೆ ಪ್ರಮಾಣದಲ್ಲಿದ್ದ ರೋಗನಿರೋಧಕ ಶಕ್ತಿಯ ವ್ಯವಸ್ಥೆಯ ಮೇಲೆ ಮ್ಯೂಕೋರ್ಮೈಕೋಸಿಸ್ ಫಂಗಲ್ ಸೋಂಕು ದಾಳಿ ಮಾಡಿದೆ. ಇದು ಹೊಸ ಆರೋಗ್ಯದ ಸಮಸ್ಯೆಯೇನೂ ಅಲ್ಲ, ಸ್ಟೆರಾಯ್ಡ್ಸ್ ನ ಬಳಕೆಯಿಂದಾಗಿ ಹೆಚ್ಚುವರಿ ಶುಗರ್ ಮಟ್ಟ ಹಾಗೂ ಇಮ್ಯುನಿಟಿಯನ್ನು ಕುಗ್ಗಿಸುವ ಕೆಲವು ಔಷಧಗಳಿಂದಾಗಿ ಕೋವಿಡ್-19 ರೋಗಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಡಾ. ತಾತ್ಯರಾವ್ ಲಹಾನೆ ಮಾಹಿತಿ ನೀಡಿದ್ದಾರೆ.

       ಮ್ಯೂಕೋರ್ಮೈಕೋಸಿಸ್ ನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರಿಗೆ ಕಣ್ಣನ್ನೇ ತೆಗೆಯಬೇಕಾಯಿತು, ಇದು ತೀವ್ರಗೊಂಡು ಮೆದುಳಿಗೆ ಸೋಂಕು ತಗುಲಿದರೆ ಜೀವಕ್ಕೇ ಅಪಾಯವಿದೆ. ಈ ಮ್ಯೂಕೋರ್ಮೈಕೋಸಿಸ್ ಸ್ವಾಭಾವಿಕವಾಗಿ ವಾತಾವರಣದಲ್ಲಿರುವುದಾಗಿದ್ದು, ಕಡಿಮೆ ರೋಗನಿರೋಧಕ ಶಕ್ತಿ ಹಾಗೂ ಬಹು ವಿಧದ ಆರೋಗ್ಯ ಸಮಸ್ಯೆಗಳು ಇರುವವರಿಗೆ ಹೆಚ್ಚು ತಗುಲುವ ಸಾಧ್ಯತೆ ಇದೆ. ತೀವ್ರ ತಲೆ ನೋವು, ಜ್ವರ, ಕಣ್ಣಿನ ಕೆಳಗೆ ನೋವು, ಸೈನಸ್, ದೃಷ್ಟಿ ದೋಷ ಇವುಗಳು ಮ್ಯೂಕೋರ್ಮೈಕೋಸಿಸ್ ನ ಲಕ್ಷಣಗಳಾಗಿವೆ ಎಂದು ವಿವರಿಸಿದ್ದಾರೆ ಡಾ. ಲಹಾನೆ

ಮ್ಯೂಕೋರ್ಮೈಕೋಸಿಸ್ ನ ನಿವಾರಣೆಗಾಗಿ 21 ದಿನಗಳ ಇಂಜೆಕ್ಷನ್ ಅಗತ್ಯವಿದ್ದು ಇದಕ್ಕಾಗಿ ದಿನವೊಂದಕ್ಕೆ 9,000 ರೂಪಾಯಿಗಳು ಖರ್ಚಾಗಲಿದೆ. ಹಲವರಿಗೆ ಈ ಚಿಕಿತ್ಸೆಯ ವೆಚ್ಚವನ್ನೂ ಭರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಡಾ. ಲಹಾನೆ.

          ಕೋವಿಡ್-19 ಗೆ ಚಿಕಿತ್ಸೆ ಪಡೆಯುತ್ತಿರುವವರು ಆಕ್ಸಿಜನ್ ಸಪೋರ್ಟ್ ನಲ್ಲಿದ್ದಾಗ ಹ್ಯುಮಿಡಿಫೈಯರ್ ನಿಂದ ನೀರು ಸೋರಿಕೆಯಾಗದಂತೆ (ಫಂಗಸ್ ಬೆಳವಣಿಗೆಯಾಗದಂತೆ) ಎಚ್ಚರ ವಹಿಸಬೇಕು, ಸ್ಟೆರಾಯ್ಡ್ ಗಳನ್ನು ಕ್ರಮಬದ್ಧವಾಗಿ ಬಳಕೆ ಮಾಡಬೇಕೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries