ನವದೆಹಲಿ: ಭಾರತದಲ್ಲಿ ಶೇ. 50 ರಷ್ಟು ಜನರು ಮಾಸ್ಕ್ ತೊಡುವುದಿಲ್ಲ. ಮಾಸ್ಕ್ ತೊಡುತ್ತಿರುವ ಉಳಿದ ಶೇ.50 ರಷ್ಟು ಜನರಲ್ಲಿ ಶೇ. 64 ರಷ್ಟು ಜನ ಬಾಯಿ ಮಾತ್ರ ಮುಚ್ಚುವಂತೆ ತೊಡುತ್ತಾರೆ, ಮೂಗನ್ನು ಮುಚ್ಚಿಕೊಳ್ಳುವುದಿಲ್ಲ - ಇದು ಕೋವಿಡ್ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ.
ಕೋವಿಡ್ ಸೋಂಕು ತಡೆಗೆ ಸರ್ಕಾರ ಏನು ಮಾಡಿದೆ ಎಂಬ ಪ್ರಶ್ನೆ ಹರಿದಾಡುತ್ತಿರುವಾಗ ಕರೊನಾ ಹರಡಲು ಜನಸಾಮಾನ್ಯರು ಯಾವ ರೀತಿ ಕೊಡುಗೆ ನೀಡಿದ್ದಾರೆ ಎಂಬುದನ್ನು ಸರ್ಕಾರ ಎತ್ತಿತೋರಿಸಿದೆ. ಕಳೆದ ವಾರದಲ್ಲಿ ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಸೋಂಕು ಹರಡದಂತೆ ತಡೆಯಲು ಜನರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಬಳಕೆಯ ಮುನ್ನೆಚ್ಚರಿಕೆ ವಹಿಸುವುದನ್ನು ಮುಂದುವರಿಸಬೇಕು ಎಂದಿದೆ.
ಇತ್ತೀಚೆಗೆ 25 ನಗರಗಳಲ್ಲಿ ನಡೆದ ಅಧ್ಯಯನದಲ್ಲಿ ಭಾರತದ ಅರ್ಧದಷ್ಟು ಜನರು ಮಾಸ್ಕ್ ತೊಡುವುದಿಲ್ಲ ಎಂದು ತಿಳಿದುಬಂದಿದೆ. ಮಾಸ್ಕ್ ತೊಡುತ್ತಿರುವ ಉಳಿದ ಅರ್ಧದಷ್ಟು ಜನರಲ್ಲಿ ಶೇ.64 ರಷ್ಟು ಜನ ತಮ್ಮ ಮೂಗು ಮುಚ್ಚಿಕೊಳ್ಳುವುದಿಲ್ಲ, ಬರೀ ಬಾಯನ್ನು ಮುಚ್ಚುತ್ತಾರೆ. ಶೇ.20 ರಷ್ಟು ಮಂದಿ ತಮ್ಮ ಗಲ್ಲದ ಮೇಲೆ ಮಾಸ್ಕ್ ತೊಟ್ಟರೆ, ಶೇ.2 ರಷ್ಟು ಮಂದಿ ಕತ್ತಿಗೆ ಹಾಕಿಕೊಳ್ಳುತ್ತಾರೆ. ಕೇವಲ ಶೇ. 14 ರಷ್ಟು ಜನ ಸರಿಯಾಗಿ ಬಾಯಿ, ಮೂಗು, ಗಲ್ಲ ಮುಚ್ಚುವ ಹಾಗೆ ಮಾಸ್ಕ್ ತೊಡುತ್ತಾರೆ ಅರ್ಥಾತ್ ಒಟ್ಟು ಶೇ. 7 ರಷ್ಟು ಭಾರತೀಯರು ಮಾಸ್ಕ್ಅನ್ನು ಸರಿಯಾಗಿ ತೊಡುತ್ತಿದ್ದಾರೆ ಎಂದು ಇದರಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ನಡೆಸಿದ ಸುದ್ದಿಗೋಷ್ಠಿಯಲ್ಲಿ, ದೇಶದಲ್ಲಿ ಕಳೆದ ಎರಡು ವಾರಗಳಿಂದ ಪಾಸಿಟಿವಿಟಿ ದರದಲ್ಲಿ ಇಳಿಕೆ ಕಂಡುಬಂದಿದೆ. ಆದಾಗ್ಯೂ 8 ರಾಜ್ಯಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದರೆ, 9 ರಾಜ್ಯಗಳಲ್ಲಿ 50,000 ದಿಂದ 1 ಲಕ್ಷ ಸಕ್ರಿಯ ಪ್ರಕರಣಗಳಿವೆ. ಒಟ್ಟು 19 ರಾಜ್ಯಗಳಲ್ಲಿ 50,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.
'ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಂತಹ ಕೆಲವು ರಾಜ್ಯಗಳು ಶೇ.25 ಕ್ಕೂ ಹೆಚ್ಚುಕೋವಿಡ್ ಪಾಸಿಟಿವಿಟಿ ತೋರಿಸುತ್ತಿದ್ದು, ಇದು ಕಾಳಜಿಯ ಸಂಗತಿಯಾಗಿದೆ' ಎಂದು ಅಗರ್ವಾಲ್ ಹೇಳಿದ್ದಾರೆ. ದೇಶದಲ್ಲಿ ಕೋವಿಡ್ ಪರೀಕ್ಷೆಗಳ ನಿತ್ಯ ಸರಾಸರಿ ಸಂಖ್ಯೆಯು ಫೆಬ್ರವರಿಗೆ ಹೋಲಿಸಿದರೆ ಕಳೆದ 12 ವಾರಗಳಲ್ಲಿ 2.3 ಪಟ್ಟು ಹೆಚ್ಚಿದೆ. ಮೇ 13 ರಿಂದ 19 ರ ಅವಧಿಯಲ್ಲಿ ದೇಶದ 303 ಜಿಲ್ಲೆಗಳು ಪಾಸಿಟಿವಿಟಿ ದರದಲ್ಲಿ ಇಳಿಕೆ ತೋರಿಸಿವೆ. ಒಟ್ಟು 7 ರಾಜ್ಯಗಳಲ್ಲಿ ಶೇ. 25 ಕ್ಕಿಂತ ಹೆಚ್ಚು ಪಾಸಿಟಿವಿಟಿ ಇದ್ದರೆ, 22 ರಾಜ್ಯಗಳಲ್ಲಿ ಶೇ.15 ಕ್ಕಿಂತ ಹೆಚ್ಚು ಪಾಸಿಟಿವಿಟಿ ಕಂಡುಬಂದಿದೆ ಎಂದಿದ್ದಾರೆ.







