HEALTH TIPS

ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ, ರಾತ್ರೋರಾತ್ರಿ ಲಸಿಕೆ ಉತ್ಪಾದನೆ ದ್ವಿಗುಣಗೊಳಿಸಲು ಸಾಧ್ಯವಿಲ್ಲ': ಆದಾರ್ ಪೂನಾವಾಲ

      ನವದೆಹಲಿ: ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವಂತೆ ನಿರಂತರವಾಗಿ ಕೇಳಿಬರುತ್ತಿರುವ ಒತ್ತಡಗಳಿಗೆ ತಿರುಗೇಟು ನೀಡಿರುವ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಸಿಇಒ ಆದಾರ್ ಪೂನಾವಾಲ ಅವರು, ರಾತ್ರೋ-ರಾತ್ರಿ ಲಸಿಕೆ ಉತ್ಪಾದನೆಯನ್ನು ದ್ವಿಗುಣ ಮಾಡಲು ಸಾಧ್ಯವಿಲ್ಲ ಎಂದು  ಹೇಳಿದ್ದಾರೆ.

      ಜಗತ್ತಿನಲ್ಲೇ ಅತೀ ಹೆಚ್ಚಿನ ಪ್ರಮಾಣದ ಲಸಿಕೆ ಉತ್ಪಾದಕ ಸಂಸ್ಥೆ ಎಂಬ ಕೀರ್ತಿಗೆ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಪಾತ್ರವಾಗಿದೆಯಾದರೂ ಭಾರತದ ಬೇಡಿಕೆಗೆ ಅನುಗುಣವಾಗಿ ಲಸಿಕೆ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಮುಖವಾಗಿ ದೇಶದಲ್ಲಿ ಕೋವಿಡ್ 2ನೇ ಅಲೆ  ಆರಂಭವಾದಾಗಿನಿಂದಲೂ ಕೋವಿಡ್ ಲಸಿಕೆಗಳಿಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಲಸಿಕೆಗಳ ಉತ್ಪಾದನೆ ಹೆಚ್ಚಳ ಮಾಡುವಂತೆ ಸೆರಂ ಸಂಸ್ಥೆಯ ಮುಖ್ಯಸ್ಥ ಆದಾರ್ ಪೂನಾವಾಲ ಅವರಿಗೆ ಒತ್ತಡ ಮತ್ತು ಬೆದರಿಕೆಗಳೆರಡೂ ಬರುತ್ತಿವೆ. 

     ಈ ಹಿಂದೆ ಸಂದರ್ಶನದಲ್ಲಿ ಇದೇ ವಿಚಾರ ಪ್ರಸ್ತಾಪಿಸಿದ್ದ ಪೂನಾವಾಲ ಒತ್ತಡಗಳಿಂದಾಗಿಯೇ ತಾನು ಭಾರತ ಬಿಟ್ಟು ಲಂಡನ್ ಗೆ ಬಂದಿದ್ದು, ಇಲ್ಲಿ ಲಸಿಕೆ ಉತ್ಪಾದನಾ ಘಟಕ ವಿಸ್ತರಿಸುವ ಕುರಿತು ಚಿಂತನೆಯಲ್ಲಿ ತೊಡಗಿದ್ದೇವೆ ಎಂದು ಹೇಳಿದ್ದರು. ಇಂದು ಕೂಡ ಇದೇ ವಿಚಾರವಾಗಿ ಮಾತನಾಡಿರುವ ಪೂನಾವಾಲ,  ಲಸಿಕೆ ತಯಾರಿಕೆ ವಿಶೇಷ ಪ್ರಕ್ರಿಯೆಯಾಗಿದ್ದು, ರಾತ್ರೋ-ರಾತ್ರಿ ಲಸಿಕೆ ಉತ್ಪಾದನೆಯನ್ನು ದ್ವಿಗುಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

     ಭಾರತದ ಜನಸಂಖ್ಯೆಯು ದೊಡ್ಡದಾಗಿದೆ. ಹೀಗಾಗಿ ಎಲ್ಲರಿಗೂ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಉತ್ಪಾದಿಸುವುದು ಸುಲಭದ ಕೆಲಸವಲ್ಲ. ಆದಾಗ್ಯೂ ತಮ್ಮ ಸಂಸ್ಥೆ ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅಂತೆಯೇ ಮುಂದಿನ ಕೆಲವು ತಿಂಗಳುಗಳಲ್ಲಿ 11 ಕೋಟಿ  ಲಸಿಕೆಗಳನ್ನು ಸರ್ಕಾರಕ್ಕೆ ಪೂರೈಸಲಾಗುವುದು ಎಂದು ಹೇಳಿದರು.

      ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ:
     ಲಸಿಕೆ ವಿಚಾರವಾಗಿ ಈ ಹಿಂದೆ ನಾನು ನೀಡಿದ್ದ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿರುವ ಪೂನಾವಾಲ ಈ ಕುರಿತು ಟ್ವಿಟರ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇಲ್ಲಿ ನಾನು ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಮೊದಲನೆಯದಾಗಿ, ಲಸಿಕೆ ತಯಾರಿಕೆ ಒಂದು ವಿಶೇಷ  ಪ್ರಕ್ರಿಯೆ, ಆದ್ದರಿಂದ ರಾತ್ರೋ-ರಾತ್ರಿ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಭಾರತದ ಜನಸಂಖ್ಯೆಯು ದೊಡ್ಡದಾಗಿದ್ದು, ಇದನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಎಲ್ಲಾ ವಯಸ್ಕರಿಗೆ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುವುದು ಸುಲಭದ ಕೆಲಸವಲ್ಲ. ಅತ್ಯಂತ ಮುಂದುವರಿದ ದೇಶಗಳು ಮತ್ತು  ಖ್ಯಾತನಾಮ ಕಂಪನಿಗಳು ಸಹ ತುಲನಾತ್ಮಕವಾಗಿ ಸಣ್ಣ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ತಯಾರಿಕೆಗಾಗಿ ಹೋರಾಡುತ್ತಿವೆ ಎಂದು ಹೇಳಿದ್ದಾರೆ.

     ಭಾರತ ಸರ್ಕಾರದಿಂದ ಸಂಪೂರ್ಣ ಬೆಂಬಲ ದೊರೆತಿದೆ:
     'ಕಳೆದ ವರ್ಷ ಏಪ್ರಿಲ್‌ನಿಂದ ಪುಣೆ ಮೂಲದ ಕಂಪನಿ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ವೈಜ್ಞಾನಿಕವಾಗಿರಲಿ ಅಥವಾ ನಿಯಂತ್ರಣ ಮತ್ತು ಹಣಕಾಸು ವಿಚಾರವಾಗಿರಲಿ ನಮಗೆ ಎಲ್ಲಾ ರೀತಿಯ ಬೆಂಬಲ ದೊರೆತಿದೆ. ಈ ವರೆಗೂ ನಾವು ಒಟ್ಟು 26 ಕೋಟಿ ಡೋಸ್‌ಗಳ ಆರ್ಡರ್ ಗಳನ್ನು  ಸ್ವೀಕರಿಸಿದ್ದೇವೆ. ಈ ಪೈಕಿ 15 ಕೋಟಿಗಿಂತ ಹೆಚ್ಚಿನ ಪ್ರಮಾಣವನ್ನು ಪೂರೈಸಿದ್ದೇವೆ. ನಮಗೆ ಬಂದ ಆರ್ಡರ್ ಗಳಿಗೆ ಶೇ.100 ಮುಂಗಡ ಹಣವೂ ಪಾವತಿಯಾಗಿದೆ. ಮುಂದಿನ ಕೆಲ ತಿಂಗಳುಗಳಲ್ಲಿ 11 ಕೋಟಿ ಡೋಸ್ ಲಸಿಕೆಗಳಿಗಾಗಿ ಭಾರತ ಸರ್ಕಾರ 1,732.5 ಕೋಟಿ ರೂ. ಪಾವತಿಸಿದೆ. ಮುಂದಿನ ಕೆಲ  ತಿಂಗಳುಗಳಲ್ಲಿ ವಿವಿಧ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ 11 ಕೋಟಿ ಡೋಸ್‌ ಲಸಿಕೆಗಳನ್ನು ಪೂರೈಸಲಾಗುವುದು ಎಂದು ಅವರು ಹೇಳಿದರು.

     "ಕೊನೆಯದಾಗಿ, ಲಸಿಕೆ ಸಾಧ್ಯವಾದಷ್ಟು ಬೇಗ ಲಭ್ಯವಾಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದನ್ನು ಸಾಧಿಸಲು ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾವು ಇನ್ನೂ ಹೆಚ್ಚು ಶ್ರಮಿಸುತ್ತೇವೆ ಮತ್ತು ಕೋವಿಡ್-19 ವಿರುದ್ಧದ ಭಾರತದ  ಹೋರಾಟವನ್ನು ಬಲಪಡಿಸುತ್ತೇವೆ ಎಂದು ಪೂನಾವಾಲಾ ಹೇಳಿದರು. 

    ಜುಲೈವರೆಗೆ ಕೊರೋನಾ ಲಸಿಕೆ ಕೊರತೆ:
     ದೇಶದಲ್ಲಿ ಕೋವಿಡ್ -19 ಸೋಂಕುಗಳು ಹೆಚ್ಚುತ್ತಿರುವ ಮಧ್ಯೆ, ಭಾರತದಲ್ಲಿ ಲಸಿಕೆ ಕೊರತೆಯ ಸಮಸ್ಯೆ ಜುಲೈ ತಿಂಗಳುಗಳವರೆಗೆ ಇರುತ್ತದೆ ಎಂದು ಹೇಳಿದ ಪೂನಾವಾಲ, ಜುಲೈನಲ್ಲಿ ಕೊರೋನಾ ಲಸಿಕೆಗಳ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ವರ್ಷದ ಜುಲೈನಲ್ಲಿ, ಕೋವಿಡ್-19 ಲಸಿಕೆಯ ಉತ್ಪಾದನಾ ಸಾಮರ್ಥ್ಯವು ತಿಂಗಳಿಗೆ 70 ದಶಲಕ್ಷ ಡೋಸ್‌ಗಳಿಂದ ತಿಂಗಳಿಗೆ ಸುಮಾರು 100 ದಶಲಕ್ಷ ಡೋಸ್‌ಗಳಿಗೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries