ನವದೆಹಲಿ : ಹಲವು ರಾಜ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕರೊನಾ ಲಸಿಕೆಗಳನ್ನು ಒದಗಿಸಲು ವಿಫಲವಾಗಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. 'ಫೋನ್ ಡಯಲ್ ಮಾಡಿದಾಗಲೆಲ್ಲಾ ಲಸಿಕೆ ಹಾಕಿಸಿಕೊಳ್ಳಿ ಎಂಬ ಸಂದೇಶ ನೀಡುತ್ತಲೇ ಇದ್ದೀರಿ. ಆದರೆ ಲಸಿಕೆಯೇ ಇಲ್ಲದಿದ್ದರೆ ಯಾರು ತಾನೇ ಹಾಕಿಸಿಕೊಳ್ಳಲು ಸಾಧ್ಯ ?' ಎಂದು ಕೋರ್ಟ್ ಪ್ರಶ್ನಿಸಿತು.
ದೆಹಲಿಯಲ್ಲಿ ಉಂಟಾಗುತ್ತಿದೆ ಎನ್ನಲಾದ ಕರೊನಾ ಲಸಿಕೆ ಕೊರತೆ ಬಗ್ಗೆ ಹೇಳುತ್ತಾ, 'ಫೋನ್ ಮಾಡಿದಾಗಲೆಲ್ಲಾ ಲಸಿಕಾ ಅಭಿಯಾನದ ಬಗೆಗಿನ ಆ ಒಂದು ಕಿರಿಕಿರಿ ಉಂಟುಮಾಡುವ ಸಂದೇಶವನ್ನು ಪ್ಲೇ ಮಾಡುತ್ತಿದ್ದೀರಾ. ಆದರೆ ವಾಸ್ತವವಾಗಿ ನಿಮ್ಮ ಬಳಿ ಲಸಿಕೆ ಇಲ್ಲ. ನೀವು ಜನರಿಗೆ ಲಸಿಕೆ ನೀಡುತ್ತಿಲ್ಲ. ಆದರೆ, ಲಸಿಕೆ ತೆಗೆದುಕೊಳ್ಳಿ ಅಂತ ಹೇಳುತ್ತಿದ್ದೀರಾ. ಲಸಿಕೆಯೇ ಇಲ್ಲದಿದ್ದರೆ ಯಾರು ತಾನೇ ಹಾಕಿಸಿಕೊಳ್ಳಲಾದೀತು' ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.





