ಕಾಸರಗೋಡು: ಕಾಸರಗೋಡು ಜಿಲ್ಲೆಯ ಆರೋಗ್ಯ ವಲಯದಲ್ಲಿ ಸ್ಪೆಷ್ಯಲಿಸ್ಟ್ ಡಾಕ್ಟರರ ನೇಮಕಾತಿ ತ್ವರಿತಗೊಳಿಸಲು ಯತ್ನಿಸುವುದಾಗಿ ಬಂದರು, ವಸ್ತು ಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ಆಶ್ವಾಸನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗೆ ಸಂಬಂಧಿಸಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅವಲೋಕನ ಸಭೆಯ ನಂತರ ಅವರು ಮಾತನಾಡಿದರು.
ಕಾಸರಗೋಡು ಜಿಲ್ಲೆಯ ಆರೋಗ್ಯ ವಲಯದ ಸಮಸ್ಯೆಗಳ ಬಗ್ಗೆ ಈಗಾಗಲೇ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಟಾಟಾ ಆಸ್ಪತ್ರೆ, ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ಸಹಿತ ಸಂಸ್ಥೆಗಳಲ್ಲಿ ಡಾಕ್ಟರರ, ನರ್ಸ್ ಗಳ, ಪಾರಾ ಮೆಡಿಕಲ್ ಸಿಬ್ಬಂದಿಯ ಮೊದಲಾದವರ ನೇಮಕಾತಿ ಆದೇಶ ಲಭಿಸಿದ್ದರೂ, ಕಾಸರಗೋಡು ಜಿಲ್ಲೆಗೆ ಆಗಮಿಸಲು ಉದಾಸೀನ ತೋರುವ ಮನೋಭಾವ ಸಿಬ್ಬಂದಿಯಲ್ಲಿದೆ. ಇದು ಇತರ ವಲಯಗಳಲ್ಲೂ ಕಂಡುಬರುತ್ತಿದೆ ಎಂದು ಜನಪ್ರತಿನಿಧಿಗಳು ಸಭೆಯಲ್ಲಿ ಧ್ವನಿ ಎತ್ತಿದ್ದರು.
ಈ ಬಗ್ಗೆ ಸರಕಾರಿ ಕಾನೂನು ಪ್ರಕಾರ ತೀರ್ಮಾನ ನಡೆಯಲಿದೆ ಎಂದು ಸಚಿವ ಪ್ರತಿಕ್ರಿಯಿಸಿದರು. ಕೋವಿಡ್ ಪ್ರತಿರೋಧ ರಂಗದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮಾದರಿ ರೂಪದ ಚಟುವಟಿಕೆಗಳು ನಡೆಯುತ್ತಿವೆ. ಇದು ಮುಂದೆಯೂ ನಡೆಯಲಿದ್ದು, ಸರಕಾರದ ಪೂರ್ಣ ಬೆಂಬಲ ಲಭಿಸಲಿದೆ ಎಂದು ನುಡಿದರು.
ರಾಜ್ಯಕ್ಕೆ ಏಮ್ಸ್ ಆಸ್ಪತ್ರೆ ಮಂಜೂರು ಗೊಳ್ಳುವುದಿದ್ದಲ್ಲಿ ಅದು ಕಾಸರಗೋಡಿಗೆ ಸಿಗಬೇಕು ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮತ್ತು ಶಾಸಕರು ಒತ್ತಾಯಿಸಿದರು. ಆಂಬುಲೆನ್ಸ್ ಗಳಿಗೆ, ಮೆಡಿಕಲ್ ಉಪಕರಣಗಳಿಗೆ ಸಂಸದರ, ಶಾಸಕರ ನಿಧಿ ಮೀಸಲಿರಿಸಿದರೂ, ಅವನ್ನು ಖರೀದಿಸುವಲ್ಲಿ ವಿಳಂಬವಾಗುತ್ತಿದ್ದು, ಪರಿಹಾರ ನಡೆಸುವಂತೆ ಆಗ್ರಹಿಸಲಾಯಿತು.
ಕಾಸರಗೋಡು ಜಿಲ್ಲೆಯಲ್ಲಿ ಟ್ರೋಮೋ ಕೇರ್ ಸೌಲಭ್ಯ ಒದಗಿಸಬೇಕು, ಮೆಡಿಕಲ್ ಕಾಲೇಜು ನಿರ್ಮಾಣ ತ್ವರಿತಗೊಳಿಸಬೇಕು. ಮಂಜೇಶ್ವರದಿಂದ ಮಾಟ್ಟೂಲ್ ವರೆಗಿನ ಕರಾವಳಿ ತಡೆಗೋಡೆ ನಿರ್ಮಾಣ ಪೂರ್ಣಗೊಳಿಸುವಂತೆ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಒತ್ತಾಯಿಸಿದರು.
ಮಂಜೇಶ್ವರ ವಲಯದಲ್ಲಿ 108 ಆಂಬುಲೆನ್ಸ್ ಸೇವೆ ಖಚಿತಪಡಿಸಬೇಕು. ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಈ ಹಿಂದೆ ಮಂಜೂರು ಮಾಡಿದ್ದ ಆಂಬುಲೆನ್ಸ್ ತಕ್ಷಣ ತಲಪಿಸಬೇಕು ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಆಗ್ರಹಿಸಿದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಹೆಚ್ಚಳಗೊಳಿಸಬೇಕು. ಎಲ್ಲ ವೆಂಟಿಲೇಟರ್ ಗಳು ಕಾರ್ಯಪ್ರವೃತ್ತಗೊಳಿಸಬೇಕು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಒತ್ತಾಯಿಸಿದರು.
ಮಂಜೇರಿ ಮಾದರಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಟಾಟಾ ಅಸ್ಪತ್ರೆಯ ಜಂಟಿ ವತಿಯಿಂದ ಜಿಲ್ಲೆಯ ಎರಡನೇ ಮೆಡಿಕಲ್ ಕಾಲೇಜು ಆಗಿ ಮಾರ್ಪಡಿಸಬೇಕು ಎಂದು ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ತಿಳಿಸಿದರು.
10 ಕಿಮೀ ಸುತ್ತಳತೆಯಲ್ಲಿ 2 ಆಸ್ಪತ್ರೆಗಳಿದ್ದರೂ, ಇವು ಜನತೆಗೆ ಪ್ರಯೋಜನವಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲೆಯಲ್ಲಿ ಸ್ಪೆಷ್ಯಲಿಸ್ಟ್ ಡಾಕ್ಟರರ ಸೇವೆ ಖಚಿತಪಡಿಸಬೇಕು. ವಕಿರ್ಂಗ್ ಅರೇಂಜ್ ಮೆಂಟ್, ಡೆಪ್ಯೂಟೇಷನ್ ವ್ಯವಸ್ಥೆಯಲ್ಲಿ ಸಿಬ್ಬಂದಿ ವರ್ಗಾವಣೆಗೊಂಡು ತೆರಳುತ್ತಿರುವ ಪ್ರಕ್ರಿಯೆಯನ್ನು ನಿಯಂತ್ರಿಸಬೇಕು ಎಂದು ಶಾಸಕ ಎಂ.ರಾಜಗೋಪಾಲನ್ ಆಗ್ರಹಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಹೆಚ್ಚುವರಿ ದಂಡನಾಧಿಕಾರಿ ಅತುಲ್ ಸ್ವಾಮಿನಾಥ್, ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಕೆ.ಆರ್.ರಾಜನ್ ಮೊದಲಾದವರು ಉಪಸ್ಥಿತರಿದ್ದರು.


