ನವದೆಹಲಿ: ಭಾರತವು ಅಪರಾಧಗಳನ್ನು ಪತ್ತೆ ಹಚ್ಚಲು ಮತ್ತು ತಡೆಯಲು ವಾಟ್ಸ್‌ಆಯಪ್ ನಂತಹ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಅಥವಾ ಕೊನೆಯಿಂದ ಕೊನೆಯವರೆಗೆ ಗೂಢಲಿಪೀಕರಣದ ಇನ್ಸ್ಟಂಟ್ ಮೆಸೇಜಿಂಗ್ ವೇದಿಕೆಗಳಿಂದ ಸೀಮಿತ ದತ್ತಾಂಶಗಳನ್ನು ಪಡೆಯಲು ನಿಯಂತ್ರಣ ವ್ಯವಸ್ಥೆಯನ್ನು ಬಯಸಿರುವ ಏಕಮೇವ ದೇಶವಲ್ಲ, ಅಮೆರಿಕ ಮತ್ತು ಬ್ರಝಿಲ್ ನಂತಹ ದೇಶಗಳು ಈ ಮೊದಲೇ ಇಂತಹ ಬೇಡಿಕೆಯನ್ನು ಮಂಡಿಸಿವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಶನಿವಾರ ಹೇಳಿದರು.
'ವಾಟ್ಸ್‌ಆಯಪ್ ನ ಸಾಮಾನ್ಯ ಬಳಕೆದಾರರು ಭೀತಿ ಪಡಬೇಕಿಲ್ಲ. ಅವರು ಈಗಿನಂತೆಯೇ ವಾಟ್ಸ್‌ಆಯಪ್ ಬಳಕೆಯನ್ನು ಮುಂದುವರಿಸಬಹುದು. ನಾವು ಕೋರುತ್ತಿರುವ ಮಾಹಿತಿಗಳು ಅತ್ಯಂತ ಸೀಮಿತವಾಗಿವೆ ' ಎಂದು ಅವರು ಸ್ಪಷ್ಟಪಡಿಸಿದರು.
ಮಾಹಿತಿಯ ಮೊದಲ ಮೂಲವನ್ನು ಗುರುತಿಸುವ ಕುರಿತಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಿಯಮಗಳು ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಅನ್ನು ಉಲ್ಲಂಘಿಸುತ್ತವೆ ಎಂದು ದೂರಿ ವಾಟ್ಸ್‌ಆಯಪ್ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿರುವ ಸಂದರ್ಭದಲ್ಲಿ ಪ್ರಸಾದ ಅವರ ಈ ಹೇಳಿಕೆ ಹೊರಬಿದ್ದಿದೆ. ಸರಕಾರವು ವ್ಯಕ್ತಿಗಳ ಖಾಸಗಿತನವನ್ನು ಗೌರವಿಸುತ್ತದೆ ಮತ್ತು ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಸೂಚನೆಗಳನ್ನು ಪಾಲಿಸುತ್ತದೆ. ಆದರೆ ಭಯೋತ್ಪಾದಕರು, ಅಪರಾಧಿಗಳು ಅಥವಾ ಭ್ರಷ್ಟ ವ್ಯಕ್ತಿಗಳು ಖಾಸಗಿತನದ ಯಾವುದೇ ಹಕ್ಕು ಹೊಂದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಅದೇ ತೀರ್ಪಿನಲ್ಲಿ ಹೇಳಿರುವುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ ಪ್ರಸಾದ್,'ಕ್ಯಾಂಬ್ರಿಜ್ ಅನಲಿಟಿಕಾ ಲಕ್ಷಾಂತರ ಸಾಮಾಜಿಕ ಜಾಲತಾಣ ಬಳಕೆದಾರರ ಮಾಹಿತಿಗಳನ್ನು ಪಡೆದುಕೊಂಡಿದ್ದು ಹೇಗೆ? ಖಾಸಗಿತನ ಕುರಿತು ಈ ಎಲ್ಲ ಭಾಷಣಗಳು ಭಾರತಕ್ಕೆ ಮಾತ್ರ ಮೀಸಲಾಗಿವೆಯೇ? ನಿಮ್ಮ ಖಾಸಗಿತನ ನೀತಿಯನ್ನು ಪರಿಷ್ಕರಿಸುತ್ತಿರುವ ನೀವು (ವಾಟ್ಸ್‌ಆಯಪ್) ವ್ಯಾವಹಾರಿಕ ಖಾತೆಗಳೊಂದಿಗೆ ವ್ಯವಹರಿಸುತ್ತಿರುವ ಬಳಕೆದಾರರ ಮಾಹಿತಿಗಳನ್ನು ಫೇಸ್ಬುಕ್ ಜೊತೆ ಹಂಚಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದೀರಿ. ಅವರೇ (ವಾಟ್ಸ್‌ಆಯಪ್) ಖಾಸಗಿತನದ ಜೊತೆ ರಾಜಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಮತ್ತು ಇಲ್ಲಿ ನಮಗೆ ಖಾಸಗಿತನದ ಬಗ್ಗೆ ಬೋಧಿಸುತ್ತಿದ್ದಾರೆ. ಇವು ಇಬ್ಬಗೆ ನಿಲುವುಗಳಾಗಿವೆ' ಎಂದರು.
ಎಂಡ್ ಟು ಎಂಡ್ ಎನ್ಕ್ರಿಪ್ಶನ್ ವಿಧಾನದಡಿ ಸಂದೇಶವೊಂದು ಅದನ್ನು ಕಳುಹಿಸುವವರ ಸಾಧನದಿಂದ ಹೊರಬಿದ್ದಾಗ ಓದಲಾಗದ ಗೂಢಲಿಪಿಗೆ ರೂಪಾಂತರಗೊಳ್ಳುತ್ತದೆ ಮತ್ತು ಉದ್ದೇಶಿತ ಸಾಧನವನ್ನು ತಲುಪಿದಾಗ ಗೂಢಲಿಪೀಕರಣವನ್ನು ಕಳಚಿಕೊಂಡು ಓದಬಲ್ಲ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆ.
ತಮ್ಮ ವೇದಿಕೆಯ ಮೂಲಕ ಯಾವ ಸಂದೇಶಗಳನ್ನು ರವಾನಿಸಲಾಗುತ್ತಿದೆ ಎನ್ನುವುದು ತಮಗೇ ಗೊತ್ತಿರುವುದಿಲ್ಲ, ಹೀಗಾಗಿ ನಿರ್ದಿಷ್ಟ ಪ್ರಕರಣಗಳಲ್ಲಿಯೂ ಗೂಢಲಿಪೀಕರಣದ ಉಲ್ಲಂಘನೆಗೆ ಸಂಬಂಧಿಸಿದಂತೆ ತಾವು ಸರಕಾರಕ್ಕೆ ನೆರವಾಗಲು ಸಾಧ್ಯವಿಲ್ಲ ಎಂದು ವಾಟ್ಸ್‌ಆಯಪ್ ಮತ್ತು ಇತರ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ ಫಾರ್ಮ್ ಗಳು ಹೇಳಿಕೊಳ್ಳುತ್ತಲೇ ಬಂದಿವೆ.'ಸಂದೇಶಗಳಲ್ಲಿಯ ವಿಷಯಗಳನ್ನು ನಾವು ಕೋರುತ್ತಿಲ್ಲ. ಕಿಡಿಗೇಡಿತನವನ್ನು ಆರಂಭಿಸಿದ್ದು ಯಾರು ಮತ್ತು ಅದು ವಿದೇಶದಿಂದ ಬಂದಿದ್ದಾದರೆ ಭಾರತದಲ್ಲಿ ಮೊದಲು ಅದನ್ನು ಸ್ವೀಕರಿಸಿದವರು ಯಾರು ಎನ್ನುವುದನ್ನಷ್ಟೇ ತಿಳಿದುಕೊಳ್ಳಲು ನಾವು ಬಯಸಿದ್ದೇವೆ. ನಾವು ಸೂರ್ಯಚಂದ್ರರನ್ನು ಕೇಳುತ್ತಿಲ್ಲ,ಅವರ ಗೂಢಲಿಪೀಕರಣದ ಉಲ್ಲಂಘನೆಯನ್ನೂ ಕೇಳುತ್ತಿಲ್ಲ. ಸಾಮಾನ್ಯ ಬಳಕೆದಾರರು ಗೂಢಲಿಪೀಕರಣದ ಸಂಪೂರ್ಣ ಹಕ್ಕು ಹೊಂದಿರುತ್ತಾರೆ ಎಂದು ನಾನು ಪುನರುಚ್ಚರಿಸುತ್ತಿದ್ದೇನೆ 'ಎಂದು ಪ್ರಸಾದ್ ಹೇಳಿದರು.
ನೂತನ ಐಟಿ ನಿಯಮಗಳ ಪ್ರಮುಖ ಅಂಶಗಳು ಭಾರತದಲ್ಲಿಯ ಬಳಕೆದಾರರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಬೆದರಿಕೆಗಳಾಗಿವೆ ಹಾಗೂ ಸ್ವತಂತ್ರ,ಮುಕ್ತ ಸಾರ್ವಜನಿಕ ಸಂಭಾಷಣೆಗಳನ್ನು ಪ್ರತಿಬಂಧಿಸುತ್ತವೆ ಎಂಬ ಹೇಳಿಕೆಗಾಗಿ ಟ್ವಿಟರ್ ಅನ್ನು ಅವರು ಖಂಡಿಸಿದರು.







