ಗಾಜಿಯಾಬಾದ್: ಒಬ್ಬರಲ್ಲಿಯೇ ಕಪ್ಪು, ಹಳದಿ ಮತ್ತು ಬಿಳಿ ಶಿಲೀಂಧ್ರ ಪತ್ತೆಯಾಗುವ ಮೂಲಕ ವಿಭಿನ್ನ ಪ್ರಕರಣವಾಗಿ ಗಮನಸೆಳೆದಿದ್ದ ಇಲ್ಲಿನ 59 ವರ್ಷದ ಕೋವಿಡ್ ರೋಗಿಯೊಬ್ಬರು ಶನಿವಾರ ಮೃತಪಟ್ಟರು.
ಟಾಕ್ಸಿಮಿಯಾ (ರಕ್ತ ಕಲುಷಿತಗೊಳ್ಳುವುದು) ಕಾರಣದಿಂದ ಕುನ್ವರ್ ಸಿಂಗ್ ಹೆಸರಿನ ರೋಗಿ ಮೃತಪಟ್ಟರು ಎಂದು ಇಲ್ಲಿನ ಹರ್ಷ್ ಆಸ್ಪತ್ರೆಯ ಡಾ. ಬಿ.ಪಿ.ತ್ಯಾಗಿ ಅವರು ತಿಳಿಸಿದರು.
ವೃತ್ತಿಯಿಂದ ವಕೀಲರಾಗಿದ್ದ ರೋಗಿಯು ಇತ್ತೀಚಿಗೆ ಕೋವಿಡ್ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಪ್ಪು ಮತ್ತು ಬಿಳಿ ಶಿಲೀಂಧ್ರಗಳ ಜೊತೆಗೆ ಹಳದಿ ಶಿಲೀಂಧ್ರವೂ ಅವರ ದೇಹದಲ್ಲಿ ಪತ್ತೆಯಾಗಿತ್ತು ಎಂದು ತಿಳಿಸಿದರು.
ಈ ಮಧ್ಯೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮುರಾದಾನಗರ್ ನಿವಾಸಿಯೊಬ್ಬರಲ್ಲಿ ಹಳದಿ ಶಿಲೀಂಧ್ರ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.





