ನವದೆಹಲಿ: ಭಾರತ ಮತ್ತು ಚೀನಾದ ನಡುವಿನ ಪೂರ್ವ ಲಡಾಖ್ ಗಡಿಯಲ್ಲಿ ಇರುವ ಗಲ್ವಾನ್ ಕಣಿವೆ ಮತ್ತೊಮ್ಮೆ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಉಭಯ ಸೇನಾ ಪಡೆಗಳು ಮೇ ಮೊದಲ ವಾರದಲ್ಲಿ ಮುಖಾಮುಖಿ ಆಗಿತ್ತು. ಆದರೆ ಯಾವುದೇ ಸಂಘರ್ಷವಿಲ್ಲದೇ ವಾಪಸ್ ತೆರಳಿರುವ ಬಗ್ಗೆ ಹಿರಿಯ ಸೇನಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಕಳೆದ 2020 ಜೂನ್ 15ರಂದು ಎರಡು ಸೇನಾಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಸಂಘರ್ಷದ ಬಳಿಕ ಗಲ್ವಾನ್ ಕಣಿವೆಯ Y-ಜಂಕ್ಷನ್ ಬಳಿ ಎರಡು ಗಡಿಗಳಲ್ಲಿ 1.50 ಕಿಲೋ ಮೀಟರ್ ಪ್ರದೇಶದಲ್ಲಿ ಯಾವುದೇ ರೀತಿ ಗಸ್ತು ತಿರುಗುವಂತಿಲ್ಲ ಎಂದು ಷರತ್ತು ವಿಧಿಸಲಾಗಿತ್ತು.
ಭಾರತ ಮತ್ತು ಚೀನಾ ಗಡಿಯಲ್ಲಿ ಕಳೆದ ವರ್ಷದಿಂದ ಗಸ್ತು-ರಹಿತ ವಲಯವನ್ನು ರಚಿಸಲಾಗಿತ್ತು. ಎರಡು ಕಡೆ ಸೈನಿಕರು ಗಡಿರೇಖೆ ಉಲ್ಲಂಘಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ನೋಡಿಕೊಳ್ಳಲು ಆಗಾಗ ವಿಚಕ್ಷಣ ದಳದ ಸಿಬ್ಬಂದಿಯು ಗಡಿ ಪ್ರದೇಶಕ್ಕೆ ತೆರಳುತ್ತಿದ್ದರು. ಇದೇ ರೀತಿ ಮೇ ತಿಂಗಳ ಮೊದಲ ವಾರದಲ್ಲಿ ಗಡಿಗೆ ತೆರಳಿದ ಸಂದರ್ಭದಲ್ಲಿ ಎರಡು ಸೇನಾಪಡೆಗಳ ಯೋಧರು ಮುಖಾಮುಖಿಯಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಸಂಘರ್ಷಗಳು ನಡೆದಿಲ್ಲ ಎಂದು ತಿಳಿದು ಬಂದಿದೆ.
ಗಡಿಯಲ್ಲಿ ಸೇನಾ ಪ್ರಮಾಣ ತಗ್ಗಿಸದ ಚೀನಾ:
ಗಲ್ವಾನ್ ಕಣಿವೆಯ ಗಸ್ತು-ರಹಿತ ಪ್ರದೇಶದಲ್ಲೇ ಇಂದಿಗೂ ಚೀನಾ ತನ್ನ ಸೈನಿಕರ ನೆಲೆಗಳನ್ನು ಸ್ಥಾಪಿಸಿಕೊಂಡಿದೆ. ಉಭಯ ರಾಷ್ಟ್ರಗಳ ನಡುವಿನ ಸಂಧಾನ ಮಾತುಕತೆ ನಂತರದಲ್ಲೂ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈ ಅನುಮಾನದ ಮೇಲೆ ಭಾರತೀಯ ಸೇನಾಪಡೆ ಕೂಡಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಗಡಿಯಲ್ಲಿ ಹೆಚ್ಚುವರಿ ಯೋಧರನ್ನು ನಿಯೋಜನೆ ಮಾಡಲಾಗಿದೆ.
ಚೀನಾದಿಂದ ಗಡಿ ಪ್ರದೇಶದಲ್ಲಿ ಶಾಶ್ವತ ರಚನೆ:
ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಮಧ್ಯೆಯೂ ಗಡಿ ಪ್ರದೇಶದಲ್ಲಿ ಶಾಶ್ವತ ನೆಲೆಗಳನ್ನು ರಚಿಸಿಕೊಳ್ಳಲು ಚೀನಾ ಮುಂದಾಗಿದೆ. ಉತ್ತರ ಅಕ್ಸಾಯ್ ಚಿನ್ ಪ್ರದೇಶದ ಕ್ಸಿನ್-ಜಿಯಾಂಗ್ ಮತ್ತು ಟಿಬೆಟ್ (ಜಿ-219) ರಾಷ್ಟ್ರೀಯ ಹೆದ್ದಾರಿ ಬಳಿಯ ಕಾಂಗ್ಸಿವಾರ್ ಮತ್ತು ರುಡೋಕ್ ಬಳಿ ಶಾಶ್ವತ ನೆಲೆ ರಚಿಸಲು ಚೀನಾ ಯೋಜನೆ ಹಾಕಿಕೊಂಡಿದೆ. ಈ ಪ್ರದೇಶವು ಟಿಬೆಟ್ ದಕ್ಷಿಣ ಭಾಗದಲ್ಲಿದ್ದು, ಪ್ಯಾಂಗ್ಯಾಂಗ್ ಲೇಕ್ ಪೂರ್ವಭಾಗಕ್ಕೆ ಸನ್ನಿಹಿತದಲ್ಲಿದೆ. ಚಳಿಗಾಲದ ಸಂದರ್ಭದಲ್ಲಿ ಎತ್ತರದ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಪೀಪಲ್ಸ್ ಲಿಬರೇಷನ್ ಆರ್ಮಿಯ ಯೋಧರಿಗೆ ಈ ಶಾಶ್ವತ ನೆಲೆಯಲ್ಲಿ ಆಶ್ರಯ ನೀಡಲು ಚೀನಾ ಯೋಜನೆ ಹಾಕಿಕೊಂಡಿದೆ.





