ತಿರುವನಂತಪುರಂ: ಕುಟುಂಬ ರಾಜಕಾರಣ ಭಾರತದಲ್ಲಿ ಹೊಸತೇನಲ್ಲ. ಹಲವು ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳು ಒಂದೇ ಪಕ್ಷದಲ್ಲಿ ಮುಂದುವರೆದುಕೊಂಡು ಹೋಗುವ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಆದರೆ ಇದೇ ಮೊದಲ ಬಾರಿಗೆ ಮಾವ-ಅಳಿಯ ಒಟ್ಟಾಗಿ ಆಡಳಿತದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದೇ ಮೊದಲ ಬಾರಿ ಮಾವ ಹಾಗೂ ಅಳಿಯ ಕೇರಳ ವಿಧಾನಸಭೆಯಲ್ಲಿ ಶೀಘ್ರವೇ ಆಡಳಿತ ಆರಂಭಿಸಲು ಸಜ್ಜಾಗುತ್ತಿದ್ದು, ಹೊಸ ರಾಜಕೀಯ ಅಧ್ಯಾಯ ಬರೆಯಲು ತಯಾರಾಗುತ್ತಿದ್ದಾರೆ. 77 ವರ್ಷದ ಪಿಣರಾಯಿ ವಿಜಯನ್ ಹಾಗೂ ಡೆಮಾಕ್ರೆಟಿಕ್ ಯೂತ್ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಮೊಹಮದ್ ರಿಯಾಸ್ ಅವರೇ ಸದನದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಮಾವ -ಅಳಿಯ.
ಬೆಂಗಳೂರಿನಲ್ಲಿರುವ ಐಟಿ ಉದ್ಯಮಿ, ವಿಜಯನ್ ಅವರ ಪುತ್ರಿ ವೀಣಾ ಅವರ ಪತಿಯೇ ರಿಯಾಸ್. 2020ರ ಜೂನ್‌ನಲ್ಲ ವೀಣಾ ಹಾಗೂ ರಿಯಾಸ್ ಮದುವೆಯಾಗಿದ್ದರು.
ಪಿಣರಾಯಿ ವಿಜಯನ್ ಅವರು ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಕಣ್ಣೂರು ಜಿಲ್ಲೆಯ ಧರ್ಮದಂನಲ್ಲಿ ಗೆಲುವು ಸಾಧಿಸಿದ್ದು, 44 ವರ್ಷದ ರಿಯಾಸ್, ಕೋಯಿಕ್ಕೋಡ್‌ನಲ್ಲಿನ ಬೇಪೋರ್‌ನಿಂದ ಆಯ್ಕೆಯಾಗಿದ್ದಾರೆ. ಯುವ ಮುಖಂಡ ರಿಯಾಸ್ ಈ ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿಯೂ ಕೋಯಿಕ್ಕೋಡ್‌ನಿಂದ ಸ್ಪರ್ಧಿಸಿದ್ದರು.
ದೇವರನಾಡಲ್ಲಿ ಪಿಣರಾಯಿ ವಿಜಯನ್ ಗೆ ಒಲಿದ ವಿಜಯಲಕ್ಷ್ಮಿ
ಸಿಎಂ ಪಿಣರಾಯಿ ವಿಜಯನ್ ಅವರು 40 ವರ್ಷದಲ್ಲಿ, ಎರಡನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.





