ವಾಶಿಂಗ್ಟನ್ : ಯುವಕರು ನಿಗದಿತ ತೂಕಕ್ಕಿಂತ ಕೊಂಚವೇ ಹೆಚ್ಚು ತೂಕ ಹೊಂದಿದರೂ ಕೊರೋನ ವೈರಸ್ ಕಾಯಿಲೆಯು ಅವರಲ್ಲಿ ಗಂಭೀರ ಸ್ವರೂಪಕ್ಕೆ ತಿರುಗಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
The Lancet Diabetes & Endocrinology journal ನಲ್ಲಿ ಗುರುವಾರ ಪ್ರಕಟಗೊಂಡ ಅಧ್ಯಯನವು, ಕೊರೋನ ವೈರಸ್ ಸಾಂಕ್ರಾಮಿಕವು ಯಾರಲ್ಲಿ ಗಂಭೀರ ಸ್ವರೂಪವನ್ನು ತಾಳುತ್ತದೆ ಎಂಬ ಬಗ್ಗೆ ಹೊಸ ಮಾಹಿತಿಗಳನ್ನು ನೀಡಿದೆ. ನಿರ್ದಿಷ್ಟ ವಯೋ ಗುಂಪುಗಳು ಮತ್ತು ಜನಾಂಗೀಯ ಗುಂಪುಗಳ ಮೇಲೆ ವೈರಸ್ನ ಪರಿಣಾಮ ಹಾಗೂ ತೂಕ ಹೆಚ್ಚಳದ ಪಾತ್ರದ ಬಗ್ಗೆ ಮಹತ್ವದ ಒಳನೋಟಗಳನ್ನು ಒದಗಿಸಿದೆ.
ಪುನರಾವರ್ತಿತ ಲಾಕ್ಡೌನ್ ಗಳು ಮತ್ತು ಸಾಂಕ್ರಾಮಿಕ ತಂದಿರುವ ಒತ್ತಡವು ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನರ ಸೊಂಟದ ಸುತ್ತಳತೆಯನ್ನು ಹಿಗ್ಗಿಸಿರುವ ಹಾಗೂ ಕೇವಲ ಬೊಜ್ಜು ದೇಹಿಗಳಲ್ಲಿ ಮಾತ್ರ ಸಾಂಕ್ರಾಮಿಕದ ತೀವ್ರ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂಬ ಕಲ್ಪನೆಯನ್ನು ಹೋಗಲಾಡಿಸಿರುವ ಸಂದರ್ಭದಲ್ಲೇ ಹೊಸ ಅಧ್ಯಯನ ಹೊರಬಿದ್ದಿದೆ.
ಬಾಡಿ-ಮಾಸ್ ಸೂಚ್ಯಂಕ 23ನ್ನು ಆರೋಗ್ಯಯುತ ಶ್ರೇಣಿಯ ಗರಿಷ್ಠ ಮಿತಿ ಎಂಬುದಾಗಿ ಪರಿಗಣಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಬಾಡಿ-ಮಾಸ್ ಸೂಚ್ಯಂಕ ಹೊಂದಿರುವವರು ಈಗಾಗಲೇ ಕೊರೋನ ವೈರಸ್ ಸಾಂಕ್ರಾಮಿಕದಿಂದ ಗರಿಷ್ಠ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಬ್ರಿಟನ್ನ ಸಂಶೋಧಕರು ಹೇಳಿದ್ದಾರೆ. ಬಾಡಿ-ಮಾಸ್ ಸೂಚ್ಯಂಕದಲ್ಲಿ ಆಗುವ ಪ್ರತಿ ಒಂದು ಅಂಶದ ಏರಿಕೆಯು ಜನರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು 5 ಶೇಕಡದಷ್ಟು ಹಾಗೂ ತುರ್ತು ನಿಗಾ ಘಟಕಕ್ಕೆ ದಾಖಲಾಗುವ ಸಾಧ್ಯತೆಯನ್ನು 10 ಶೇಕಡದಷ್ಟು ಹೆಚ್ಚಿಸುತ್ತದೆ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ.
ಬಾಡಿ-ಮಾಸ್ ಸೂಚ್ಯಂಕದಲ್ಲಿ ಆಗುವ ಏರಿಕೆಯ ಗರಿಷ್ಠ ಪರಿಣಾಮವು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲೆ ಆಗುತ್ತದೆ. ಇತರ ಜನಾಂಗೀಯ ಗುಂಪುಗಳಿಗೆ ಹೋಲಿಸಿದರೆ ಆಫ್ರಿಕನ್ ಕಪ್ಪು ವರ್ಣೀಯರ ಮೇಲೆ ಇದರ ಪರಿಣಾಮವು ಹೆಚ್ಚು ಭೀಕರವಾಗಿರುತ್ತದೆ. ಇಂಗ್ಲೆಂಡ್ನಲ್ಲಿ ಸುಮಾರು 70 ಲಕ್ಷ ಜನರ ಆರೋಗ್ಯ ದಾಖಲೆಗಳನ್ನು ಅಧ್ಯಯನ ಮಾಡಿದ ಬಳಿಕ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. 80 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರ ಮೇಲೆ ಬೊಜ್ಜಿನ ಅಂಶವು ಹೆಚ್ಚಿನ ಪರಿಣಾಮವನ್ನು ಬೀರಿಲ್ಲ.






