ಬದಿಯಡ್ಕ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷಿಕರು ಆತಂಕಕ್ಕೀಡಾಗಿದ್ದಾರೆ. ಬೇಸಿಗೆ ಕಾಲದಲ್ಲಿ ಹೊಳೆಗಳಿಗೆ ಕಟ್ಟಿದ ಕಟ್ಟಗಳನ್ನು ತೆರವುಗೊಳಿಸದಿರುವುದರಿಂದ ನೀರು ತುಂಬಿದ್ದು, ಹೊಳೆಯ ಬದಿಯ ತೋಟಗಳಲ್ಲಿ ನೀರು ನಿಂತಿದೆ.
ವಿಪರೀತ ಗಾಳಿ ಮಳೆಗೆ ಅಡಿಕೆ, ತೆಂಗಿನ ಮರಗಳೂ ಕೆಲವು ಕಡೆಗಳಲ್ಲಿ ನೆಲಕ್ಕುರುಳಿದೆ. ಎರಡು ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಅಡಿಕೆಗೆ ಕೊಳೆರೋಗ ಬಾಧಿಸಬಹುದೆಂಬ ಆತಂಕವೂ ಕೃಷಿಕರದ್ದಾಗಿದೆ. ಪೆರಡಾಲ ವರದಾ ನದಿಗೆ ವಿವಿಧೆಡೆಗಳಲ್ಲಿ ಪ್ರತೀವರ್ಷವೂ ಬೇಸಿಗೆಯಲ್ಲಿ ಕಟ್ಟಗಳನ್ನು ಕಟ್ಟಲಾಗುತ್ತಿದೆ. ಮಳೆಗಾಲ ಆರಂಭಕ್ಕೆ ಮೊದಲು ಅದನ್ನು ತೆರವುಗೊಳಿಸಲಾಗುತ್ತಿತ್ತು. ಆದರೆ ಅನಿರೀಕ್ಷಿತ ಮಳೆಯಿಂದಾಗಿ ಕಟ್ಟಗಳಿಗೆ ಹಾಕಿದ ಮಣ್ಣು, ಮರಗಳು ಮುಂದಿನ ವರ್ಷಕ್ಕೆ ಉಪಯೋಗಿಸಲು ಸಿಗದಂತಾಗಿದೆ. ಇದರಿಂದಾಗಿ ಮುಂದಿನ ವರ್ಷ ಕಟ್ಟ ಕಟ್ಟಲು ಹೆಚ್ಚಿನ ಶ್ರಮ, ಖರ್ಚು ಅಗತ್ಯವಿದೆ ಎಂದು ಕೃಷಿಕರು ಹೇಳುತ್ತಿದ್ದಾರೆ. ಪಳ್ಳತ್ತಡ್ಕ, ಏತಡ್ಕ ಮೊದಲಾದೆಡೆಗಳಲ್ಲೂ ಕಟ್ಟಗಳಲ್ಲಿ, ತೋಟಗಳಲ್ಲಿ ನೀರು ತುಂಬಿಕೊಂಡಿದೆ.




