ನವದೆಹಲಿ: ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವರು ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಮಧ್ಯೆ ಪರೀಕ್ಷೆ ಬೇಡ ಎಂದು ದೆಹಲಿ ಸರ್ಕಾರ ಮತ್ತು ಕೆಲ ಪೋಷಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲಿಲ್ಲ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಎರಡು ಗಂಟೆಯ ಸಭೆಯ ಬಳಿಕ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್, ಈ ವಿಚಾರದ ಬಗ್ಗೆ ಮೇ 25 ರೊಳಗೆ ಸಮಗ್ರವಾದ ಸಲಹೆಗಳನ್ನು ನೀಡುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿರುವ ಅನಿಶ್ಚಿತತೆಯನ್ನು ತೊಡೆದುಹಾಕಲು ಪರೀಕ್ಷೆ ಬಗ್ಗೆ ಶೀಘ್ರದಲ್ಲಿಯೇ ತಿಳುವಳಿಕೆಯುಳ್ಳ,ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು,ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆ, ಭದ್ರತೆ ಮತ್ತು ಭವಿಷ್ಯ ನಮಗೆ ಪ್ರಮುಖವಾಗಿದೆ ಎಂದು ಸಚಿವರು ಹೇಳಿದರು.
ಕೋವಿಡ್-19 ಎರಡನೇ ಅಲೆಯಿಂದ ಮುಂದೂಡಲಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ನಂತರದ ಪ್ರವೇಶ ಪರೀಕ್ಷೆ ಬಗ್ಗೆ ನಿರ್ಧರಿಸಲು ನಡೆದ ವರ್ಚುಯಲ್ ಸಭೆ ಫಲಪ್ರದವಾಗಿದೆ, ಅಪಾರ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಿದ್ದೇವೆ. ಮೇ 25ರೊಳಗೆ
ವಿಸ್ತೃತ ಸಲಹೆಗಳನ್ನು ಕಳುಹಿಸುವಂತೆ ರಾಜ್ಯಗಳಿಗೆ ಮನವಿ ಮಾಡಿದ್ದೇನೆ. ಪರೀಕ್ಷೆ ಸಂಬಂಧ ಶೀಘ್ರದಲ್ಲೇ ತಿಳುವಳಿಕೆಯುಳ್ಳ, ಒಮ್ಮತದ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದು ನಿಶಾಂಕ್ ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಅನೇಕ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು
ಪಾಲ್ಗೊಂಡಿದ್ದರು.
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿರುವುದಾಗಿ
ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ವಿಷಯಗಳಿಗೆ ಈಗಿರುವ ಪದ್ಧತಿಯಂತೆ ಪರೀಕ್ಷೆ ನಡೆಸಿ, ಉಳಿದಂತಹ ವಿಷಯಗಳಿಗೆ ಆಪ್ ಲೈನ್ ಪರೀಕ್ಷೆ ನಡೆಸಿ ಕಾರ್ಯಕ್ಷಮತೆ ಆಧಾರದ ಮೇಲೆ ಅಂಕಗಳನ್ನು ನೀಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಈ ಪ್ರಕಾರ ಪರೀಕ್ಷೆ ನಡೆಸಬಹುದು, ಸಾಮಾಜಿಕ ಅಂತರ ಕಾಪಾಡಲು ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಸಿಬಿಎಸ್ ಇ ಹೇಳಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.









