ಕೊಚ್ಚಿ: ಇಸ್ರೇಲ್ ನ ಹಮಾಸ್ ರಾಕೆಟ್ ದಾಳಿಯಲ್ಲಿ ಮೃತಪಟ್ಟ ಇಡುಕ್ಕಿ ಮೂಲದ ಸೌಮ್ಯಾ ಸಂತೋಷ್ ಅವರ ಶವವನ್ನು ಸ್ವೀಕರಿಸಲು ಸರ್ಕಾರಿ ಅಧಿಕಾರಿಗಳು ಆಗಮಿಸಿರಲಿಲ್ಲ. ಶವವನ್ನು ಇಸ್ರೇಲ್‍ನಿಂದ ದೆಹಲಿಗೆ ಶನಿವಾರ ಬೆಳಿಗ್ಗೆ ತರಲಾಯಿತು. ಬಳಿಕ ಅಲ್ಲಿಂದ ಕೊಚ್ಚಿಗೆ ತಲಪಿಸಲಾಯಿತು.
ಆದರೆ ಶವವನ್ನು ಸ್ವೀಕರಿಸಲು ಸೌಮ್ಯಾ ಅವರ ಸಂಬಂಧಿಕರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ನೆಡುಂಬಸ್ಸೆರಿ ವಿಮಾನ ನಿಲ್ದಾಣಕ್ಕೆ ಶನಿವಾರ ಸಂಜೆ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಮೃತದೇಹವನ್ನು ಸಂಸದ ಡೀನ್ ಕುರಿಯಕೋಸ್, ಶಾಸಕ ಪಿ ಟಿ ಥಾಮಸ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎ.ಎನ್. ರಾಧಾಕೃಷ್ಣನ್, ಸೌಮ್ಯಾ ಅವರ ಸೋದರರಾದ ಅಜೇಶ್, ಅಭಿಲಾಶ್ ಮತ್ತು ವಿಪಿನ್ ಮೊದಲಾದವರು ಸ್ವೀಕರಿಸಿದರು.
ಕೇಂದ್ರ ವಿದೇಶಾಂಗ ಸಹ ಸಚಿವ ವಿ ಮುರಲೀಧರನ್ ಅವರ ನೇತೃತ್ವದಲ್ಲಿ ನಿನ್ನೆ ಬೆಳಿಗ್ಗೆ ದೆಹಲಿಯಲ್ಲಿ ಮೃತದೇಹವನ್ನು ಸ್ವೀಕರಿಸಲಾಗಿತ್ತು. ಆದರೆ ಎಲ್.ಡಿ.ಎಫ್ ಸರ್ಕಾರದ ಪ್ರತಿನಿಧಿಗಳೋ, ಜಿಲ್ಲಾಧಿಕಾರಿಗಳಾಗಲಿ ನೆಡುಂಬಶ್ಚೇರಿಗೆ ಆಗಮಿಸಿರಲಿಲ್ಲ. ಉಗ್ರಗಾಮಿ ವಿವಾದ ಮುಂದುವರಿಕೆಯೆಂಬಂತೆ ಸೌಮ್ಯಳ ಮೃತದೇಹ ಸ್ವೀಕರಿಸಲೂ ಕನಿಷ್ಠ ಕರ್ತವ್ಯ ಪೂರೈಸದಿರುವುದು ತೀವ್ರ ಟೀಕೆಗೊಳಗಾಗಿದೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎ.ಎನ್. ರಾಧಾಕೃಷ್ಣನ್ ಅವರು ಸರ್ಕಾರಿ ಅಧಿಕಾರಿಗಳು ಸೌಮ್ಯಾ ಅವರ ಮೃತದೇಹವನ್ನು ಗೌರವಯುತವಾಗಿ ಸ್ವೀಕರಿಸಲು ಬಾರದಿರುವುದು ದೊಡ್ಡ ಲೋಪ ಎಂದು ಆರೋಪಿಸಿದ್ದಾರೆ. ಸರ್ಕಾರದ ಕ್ರಮ ಕ್ರಿಮಿನಲ್ ನಿರ್ಲಕ್ಷ್ಯ ಮತ್ತು ತಿರಸ್ಕಾರದ ಕೃತ್ಯ ಎಂದು ಅವರು ಹೇಳಿದರು. ಸೌಮ್ಯಾ ಅವರ ಶವವನ್ನು ಇಂದು ಮಧ್ಯಾಹ್ನ 2 ಗಂಟೆಗೆ ಅವರ ಕೀರಿತೋಡ್ ನಿತ್ಯಸಹಾಯ ಮಾತಾ ಚರ್ಚ್ ಆವರಣದಲ್ಲಿ ಸಮಾಧಿ ಮಾಡಲಾಗುವುದು.





