ಕೊಚ್ಚಿ: ನೂರು ಆಮ್ಲಜನಕ ಹಾಸಿಗೆಗಳನ್ನು ಹೊಂದಿರುವ ತಾತ್ಕಾಲಿಕ ಕೊರೊನಾ ಚಿಕಿತ್ಸಾ ಆಸ್ಪತ್ರೆ ಕೊಚ್ಚಿಯ ಅಂಬಾಲಮುಗಳ್ ನಲ್ಲಿ ಇಂದು(ಭಾನುವಾರ) ತೆರೆಯಲಾಗುವುದು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ರಾಜ್ಯ ಸರ್ಕಾರವು ಕಲ್ಪಿಸಿರುವ ಜಿಲ್ಲಾಡಳಿತದ ನೇತೃತ್ವದಲ್ಲಿ ಈ ಕೊರೋನಾ ಆಸ್ಪತ್ರೆಯನ್ನು ಸ್ಥಾಪಿಸಿದೆ.
ಆಮ್ಲಜನಕ ಹಾಸಿಗೆಗಳ ಸಂಖ್ಯೆಯನ್ನು ಐದು ದಿನಗಳಲ್ಲಿ 500 ಮತ್ತು ಎಂಟು ದಿನಗಳೊಳಗೆ 1500 ಕ್ಕೆ ಹೆಚ್ಚಿಸುವ ಸೂಚನೆಗಳಿವೆ. ಇದರೊಂದಿಗೆ ಆಸ್ಪತ್ರೆ ಆಮ್ಲಜನಕ ಹಾಸಿಗೆಗಳನ್ನು ಹೊಂದಿರುವ ದೇಶದ ಅತಿದೊಡ್ಡ ಕೊರೋನಾ ಚಿಕಿತ್ಸಾ ಕೇಂದ್ರವಾಗಲಿದೆ. ಭಾನುವಾರದಿಂದ ಇಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಭದ್ರತೆಯನ್ನು ಖಾತರಿಪಡಿಸುವ ಭಾಗವಾಗಿ ನೌಕಾಪಡೆಯ ತಪಾಸಣೆ ಕೂಡ ಪೂರ್ಣಗೊಂಡಿದೆ. ಆಮ್ಲಜನಕವನ್ನು ನೇರವಾಗಿ ಬಿಪಿಸಿಎಲ್ ಆಕ್ಸಿಜನ್ ಸ್ಥಾವರದಿಂದ ಸರಬರಾಜು ಮಾಡಲಾಗುತ್ತದೆ. ಇದು ಸಾರಿಗೆ ಸಮಸ್ಯೆಗಳನ್ನು ಮತ್ತು ಆಮ್ಲಜನಕದ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿರುವರು.
ಸಿ ವರ್ಗಕ್ಕೆ ಸೇರಿದ ರೋಗಿಗಳನ್ನು ಇಲ್ಲಿ ದಾಖಲಿಸಲಾಗುತ್ತದೆ. 130 ವೈದ್ಯರು ಮತ್ತು 240 ದಾದಿಯರು ಸೇರಿದಂತೆ ಸುಮಾರು 480 ಜನರನ್ನು ಕರ್ತವ್ಯಕ್ಕಾಗಿ ಇಲ್ಲಿ ನಿಯೋಜಿಸಲಾಗುವುದು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ದೃಢಪಡಿಸಿದ ಪ್ರಕರಣಗಳ ಸಂಖ್ಯೆ 69844 ರಷ್ಟಿದೆ. 117515 ಜನರು ಮನೆ ಕಣ್ಗಾವಲಿನಲ್ಲಿದ್ದಾರೆ.


