ಕಾಸರಗೋಡು: ಕೋವಿಡ್ ದ್ವಿತೀಯ ಅಲೆ ಕಾಸರಗೋಡು ಜಿಲ್ಲೆಯಲ್ಲಿ ದಾಪುಗಾಲಿರುತ್ತಿರುವ ಈ ಅವಧಿಯಲ್ಲಿ ಗಂಭೀರ ಸ್ಥಿತಿಯ ಪಾಸಿಟಿವ್ ರೋಗಿಗಳಿಗೆ ಟಾಟಾ ಟ್ರಸ್ಟ್ ನ ಸರಕಾರಿ ಕೋವಿಡ್ ಆಸ್ಪತ್ರೆ ಬಹು ಪ್ರಯೋಜನಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕೋವಿಡ್ ಸೋಂಕಿನ ಮೊದಲ ಹಂತದಲ್ಲಿ ಅತ್ಯಧಿಕ ಪ್ರಮಾಣದ ರೋಗಿಗಳಿದ್ದ ಜಿಲ್ಲೆ ಕಾಸರಗೋಡು ಎಂಬ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಾಯದೊಂದಿಗೆ ಟಾಟಾ ಸಮೂಹ ಸಂಸ್ಥೆ ಅತ್ಯಾಧುನಿಕ ಸೌಲಭ್ಯಗಳೊಂದಿಗಿನ ಆಸ್ಪತ್ರೆಯನ್ನು ಕಳೆದ ವರ್ಷ ಸೆ.9ರಂದು ಸರಕಾರಕ್ಕೆ ಹಸ್ತಾಂತರಿಸಿತ್ತು. ಈ ಆಸ್ಪತ್ರೆಯಲ್ಲಿ 175 ಸಿಬ್ಬಂದಿಯನ್ನು ಮಂಜೂರು ಮಾಡಿತ್ತು. ಸದ್ರಿ 175 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.
ಮೊದಲ ಹಂತದಲ್ಲಿ ಈ ಆಸ್ಪತ್ರೆ ಸಿ.ಎಫ್.ಎಲ್.ಟಿ. ಆಗಿ ಚಟುವಟಿಕೆ ನಡೆಸಿತ್ತು. ಏಪ್ರಿಲ್ ತಿಂಗಳಲ್ಲಿ ಐ.ಸಿ.ಯು. ಸೌಲಭ್ಯ ಏರ್ಪಡಿಸಿದ ನಂತರ ಕೋವಿಡ್ ರೋಗಿಗಳಲ್ಲಿ ಸಿ ವಿಭಾಗದ ( ಉಲ್ಭಣಾವಸ್ಥೆಯಲ್ಲಿರುವ) ಮಂದಿಗೆ ಚಿಕಿತ್ಸೆ ನೀಡುವ ರೆಫರಲ್ ಸೆಂಟರ್ ಆಗಿ ಮಾರ್ಪಟ್ಟಿತ್ತು. ಇಲ್ಲಿ ಈಗ 80 ಆಕ್ಸಿಜನ್ ಬೆಡ್ ಗಳು, 8 ವೆಂಟಿಲೇಟರ್ ಗಳ ಸಹಿತ ಸೌಲಭ್ಯಗಳಿವೆ. ಏಪ್ರಿಲ್ ತಿಂಗಳಿಂದ ಜೂ.6 ವರೆಗೆ ಸುಮಾರು 200 ಮಂದಿ ಗಂಭೀರ ಸ್ಥಿತಿಯ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
3 ಝೋನ್ ಗಳಾಗಿ ವಿಂಗಡಿಸಿ ಈ ಆಸ್ಪತ್ರೆಯಲ್ಲಿ ಒಂದು, ಎರಡು ಝೋನ್ ಗಳನ್ನು ರೋಗಿಗಳಿಗೆ, ಮೂರನೇ ಝೋನ್ ಕಾರ್ಯಾಲಯ ಚಟುವಟಿಕೆಗಳಿಗೆ ಮೀಸಲಿದೆ. 128 ಯೂನಿಟ್ ಗಳಲ್ಲಿ (ಕಂಟೈನರ್ ಗಳು) 200 ಬೆಡ್ ಗಳಿವೆ. ಯೂನಿಟ್ ಒಂದಕ್ಕೆ 40 ಅಡಿ ಉದ್ದ, 10 ಅಡಿ ಅಗಲವಿದೆ. 81000 ಚದರ ಅಡಿ ವಿಸ್ತೀರ್ಣವನ್ನು ಆಸ್ಪತ್ರೆ ಹೊಂದಿದೆ. ತೆಕ್ಕಿಲ್ ಗ್ರಾಮದ 5 ಎಕ್ರೆ ಜಾಗದಲ್ಲಿ ರಸ್ತೆ, ರಿಸೆಪ್ಶನ್ ಸೌಲಭ್ಯ, ಕಾಂಟೀನ್, ವೈದ್ಯರು, ದಾದಿಯರು ಮೊದಲಾದವರಿಗೆ ಪ್ರತ್ಯೇಕ ಕೊಠಡಿಗಳ ಸಹಿತ ಎಲ್ಲ ಸೌಲಭ್ಯಗಳೂ ಇಲ್ಲಿವೆ.
ಸದ್ರಿ 175 ಮಂದಿ ಕೋವಿಡ್ ರೋಗಿಗಳು ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ ಒಟ್ಟು 1743 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳಿಗೆ ದುರಸ್ತಿ ಕಾರ್ಯ ನಡೆದುಬರುತ್ತಿದೆ. 24 ತಾಸೂ ಚಟುವಟಿಕೆ ನಡೆಸುತ್ತಿರುವ ಆಸ್ಪತ್ರೆಯಲ್ಲಿ ಸದ್ರಿ ಲ್ಯಾಬ್ ಸೌಲಭ್ಯ, ಎಕ್ಸ್ ರೇ, ಇ.ಸಿ.ಜಿ. ಇತ್ಯಾದಿ ಸೌಲಭ್ಯಗಳಿವೆ.





