ಕಾಸರಗೋಡು: ಕೋವಿಡ್ ನ ದ್ವೀತೀಯ ಅಲೆಯ ಹಂತದಲ್ಲಿ ರೋಗಿಗಳಿಗೆ, ಕ್ವಾರೆಂಟೈನ್ ನಲ್ಲಿರುವ ಮಂದಿಗೆ ಸಾಂತ್ವನ ಒದಗಿಸಲು ಕುಟುಂಬಶ್ರೀ ಕೂಡ ರಂಗದಲ್ಲಿದೆ.
"ಮಿಷನ್ ಕೋವಿಡ್ 2021" ಎಂಬ ಹೆಸರಿನಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಕುಟುಂಬಶ್ರೀ ಆರಂಭಿಸಿದೆ. ಸ್ಥಳೀಯಾಡಳಿತೆ ಸಂಸ್ಥೆಗಳ ಮೂಲಕ ಸಂಪನ್ಮೂಲ ವ್ಯಕ್ತಿಗಳ ಮೂಲಕ "ಪ್ರತಿರೋಧ ನಡೆಸೋಣ-ಸುರಕ್ಷಿತರಾಗೋಣ" ಎಂಬ ಸಂದೇಶದೊಂದಿಗೆ ಈ ಅಭಿಯಾನ ನಡೆಯುತ್ತಿದೆ. ಕುಟುಂಬಶ್ರೀ ನೆರೆಕೂಟಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೋವಿಡ್ ಪ್ರತಿರೋಧದ ಮಾರ್ಗಸೂಚಿಗಳನ್ನು, ಕೋವಿಡ್ ಚಿಕಿತ್ಸೆ ಸೌಲಭ್ಯಗಳ ಕುರಿತು, ಇನ್ನಿತರ ವ್ಯವಸ್ಥೆಗಳ ಕುರಿತು, ಜನಜಾಗೃತಿ ಮೂಡಿಸುವ, ಅಗತ್ಯವಿರುವ ಮಂದಿಗೆ ಸ್ಥಳೀಯಾಡಳಿತೆ ಸಂಸ್ಥೆಗಳ ಮೂಲಕ ಸಹಾಯ ಒದಗಿಸುವುದು ಇತ್ಯಾದಿಗಳು ಈ ಅಭಿಯಾನದ ಪ್ರಧಾನ ಉದ್ದೇಶಗಳಾಗಿವೆ.
ಸ್ಥಳೀಯಾಡಳಿತ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಆನ್ ಲೈನ್ ಮೂಲಕ ಈ ಅಭಿಯಾನವನ್ನು ಉದ್ಘಾಟಿಸಿದರು. ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್ ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿಸಿದರು.
ಕಾಸರಗೋಡು ಜಿಲ್ಲೆಯ ಎಲ್ಲ ನೆರೆಕೂಟಗಳಲ್ಲೂ ಈ ಅಭಿಯಾನ ವಿಸ್ತೃತಗೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ರೆಸ್ಪಾನ್ಸ್ ತಂಡ ರಚಿಸಲಾಗಿದೆ. ಕುಟುಂಬಶ್ರೀ ಜಿಲ್ಲಾ ಸಮಿತಿ ಸಂಚಾಲಕರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ನಡೆಸಿ ಚಟುವಟಿಕೆಗಳ ಯೋಜನೆ ಜಾರಿಗೊಳಿಸಲಾಗುವುದು.
ಪ್ರತಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಮಿಷನ್ ಕೋವಿಡ್ 2921 ಗೆ ಸಂಬಂಧಿಸಿ ರೆಸ್ಪಾನ್ಸ್ ತಂಡ ಮತ್ತು ಸಂಪನ್ಮೂಲ ವ್ಯಕ್ತಿಗಳು ಸಜ್ಜಾಗಿದ್ದಾರೆ. ಆರೋಗ್ಯ ಇಲಾಖೆಯ ಆದೇಶ ಪ್ರಕಾರ ಕೋವಿಡ್ ಪ್ರತಿರೋಧ ಸೂಕ್ತರೀತಿ ನಡೆಯುತ್ತಿವೆಯೇ ಎಂದು ಖಚಿತಪಡಿಸಿ, ರೋಗಿಗಳಿಗೆ ಮಾನಸಿಕ ಬೆಂಬಲ ಖಚಿತಪಡಿಸುವಂತೆ ಮಿಷನ್ ಕೋವಿಡ್ 2021 ಮೂಲಕ ಎಲ್ಲ ಸಿ.ಡಿ.ಎಸ್. ಅಧ್ಯಕ್ಷೆಯರಿಗೆ ಆದೇಶ ನೀಡಲಾಗಿದೆ.
ಜೊತೆಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ಆರಂಭಿಸಿದ ಪ್ರತಿದಿನದ ಸುದ್ದಿ ವಾಹಕ ಕಾರ್ಯಕ್ರಮ ಕೆ-ಶ್ರೀ ರೇಡಿಯೋ ಮೂಲಕ ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನನಿತ್ಯ ನಡೆಸಲಾಗುವ ಕೋವಿಡ್ ಪ್ರತಿರೋಧ ಚಟುವಟಿಕೆ ಇತ್ಯಾದಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನತೆಗೆ ತಲಪಿಸಲಾಗುತ್ತಿದೆ.





