HEALTH TIPS

ಕೋವಿಡ್‌: 3,621 ಮಕ್ಕಳು ಅನಾಥ, ಒಬ್ಬ ಪೋಷಕರನ್ನು ಕಳೆದುಕೊಂಡಿರುವ 26,000 ಮಕ್ಕಳು

             ನವದೆಹಲಿ: ತಮ್ಮ ಪ್ರೀತಿಗೆ ಪಾತ್ರರಾದವರನ್ನು ಕಳೆದುಕೊಂಡು ಬದುಕು ಸಾಗಿಸುವುದು ಸುಲಭವಲ್ಲ. ಕೋವಿಡ್‌-19 ಸಾಂಕ್ರಾಮಿಕ ಕಾಯಿಲೆಯಿಂದ ಪೋಷಕರನ್ನು ಕಳೆದುಕೊಂಡಿರುವ ಹಲವು ಮಕ್ಕಳು ಅನಾಥರಾಗಿದ್ದಾರೆ. ಇವರು ಬದುಕು ಅನಿಶ್ಚಿತತೆಯಲ್ಲಿ ಮುಳುಗಿದೆ. ಮಕ್ಕಳು ಪೋಷಕರ ಜತೆಗಿನ ಭಾವನಾತ್ಮಕ ಸಂಬಂಧ ಕಳೆದುಕೊಳ್ಳುವ ಜತೆಗೆ ಹಣಕಾಸಿನ ಬೆಂಬಲವೂ ಇಲ್ಲದಂತಾಗಿದೆ.


          ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ 3,621 ಮಕ್ಕಳು ಅನಾಥರಾಗಿದ್ದಾರೆ ಮತ್ತು 26,000 ಮಕ್ಕಳು ಒಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (ಎನ್‌ಸಿಪಿಸಿಆರ್‌) ತಿಳಿಸಿದೆ.

       ಕೋವಿಡ್‌ನಿಂದಾಗಿ ತನ್ನ ತಂದೆಯನ್ನು ಕಳೆದ ತಿಂಗಳು ಕಳೆದುಕೊಂಡಿರುವ ದೆಹಲಿಯ 10 ವರ್ಷದ ಶತಾಕ್ಷಿ ಸಿನ್ಹಾಗೆ ಅನಾಥ ಭಾವ ಕಾಡತೊಡಗಿದೆ. ಶತಾಕ್ಷಿ ಈಗ ತನ್ನ ತಾಯಿ ಕಲ್ಪನಾ ಜತೆ ಪ್ರತಿನಿತ್ಯ ರೋದಿಸುತ್ತಿದ್ದಾಳೆ. ತಂದೆಯೇ ಈ ಕುಟುಂಬಕ್ಕೆ ಆಸರೆಯಾಗಿದ್ದರು. ಹೀಗಾಗಿ, ಆರ್ಥಿಕ ಬೆಂಬಲದ ಕೊರತೆ ಇವರನ್ನು ಕಾಡುತ್ತಿದೆ.

     'ನನ್ನ ಪತಿಗೆ ಸ್ವಲ್ಪ ಜ್ವರ ಮತ್ತು ಕೆಮ್ಮು ಇತ್ತು. ಆಂಬುಲೆನ್ಸ್‌ ಮತ್ತು ಹಾಸಿಗೆಗಾಗಿ ಹಲವು ಗಂಟೆಗಳ ಕಾಲ ಪರದಾಡಿದ ಬಳಿಕ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಸಾವಿಗೀಡಾದರು. ನಾನು ಗೃಹಿಣಿ. ಈಗ ಏಕಾಏಕಿ ನಾನು ಕೆಲಸಕ್ಕೆ ಹೋಗಲು ಸಾಧ್ಯವೇ? ಏನು ಮಾಡಬೇಕು ಎನ್ನುವುದು ಸಹ ಗೊತ್ತಿಲ್ಲ. ಒಂದು ವೇಳೆ ಕೆಲಸಕ್ಕೆ ಹೋದರೂ ಮಗಳನ್ನು ಎಲ್ಲಿ ಬಿಡಬೇಕು. ಯಾರ ಮೇಲೆಯೂ ವಿಶ್ವಾಸ ಇಡುವುದು ಕಷ್ಟವಾಗಿದೆ' ಎಂದು ಕಲ್ಪನಾ ತಮ್ಮ ಸಂಕಟ ತೋಡಿಕೊಂಡಿದ್ದಾರೆ.

       ಕೋವಿಡ್‌-19ಗೆ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಶುಲ್ಕವನ್ನು ಸಂಪೂರ್ಣವಾಗಿ ವಿನಾಯಿತಿ ಮಾಡುವಂತೆ ದೆಹಲಿ ಸರ್ಕಾರ ಶಾಲೆಗಳಿಗೆ ಸೂಚಿಸಿದೆ. ಈ ಯೋಜನೆ ಅಡಿಯಲ್ಲಿ ಕಲ್ಪನಾ         ಅವರು ಈಗ ತಮ್ಮ ಮಗಳಿಗೆ ಉಚಿತ ಶಿಕ್ಷಣ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ಇದೇ ರೀತಿಯ ಸಂಕಷ್ಟ ದೆಹಲಿಯ ಉತ್ತಮ ನಗರದ ಗೌರಂಗ್‌ (13) ಮತ್ತು ದಕ್ಷ ಗುಪ್ತಾ (6) ಅವರಿಗೂ ಎದುರಾಗಿದೆ. ಇ-ರಿಕ್ಷಾ ಚಾಲಕರಾಗಿದ್ದ ತಮ್ಮ ತಂದೆಯನ್ನು ಈ ಮಕ್ಕಳು ಕಳೆದುಕೊಂಡಿದ್ದಾರೆ. ಇಡೀ ಕುಟುಂಬ ತಂದೆಯ ಮೇಲೆ ಅವಲಂಬಿತವಾಗಿತ್ತು. ಲಾಕ್‌ಡೌನ್‌ನಿಂದ ಎದುರಾದ ಸಂಕಷ್ಟಗಳು, ಸವಾಲುಗಳು ಜತೆಗೆ ತಂದೆಯ ಸಾವು ಈ ಕುಟುಂಬವನ್ನು ಜರ್ಜರಿತಗೊಳಿಸಿದೆ.

          ಲಾಕ್‌ಡೌನ್‌ ಸಂದರ್ಭದಲ್ಲೇ ಹಣಕಾಸಿನ ಸಂಕಷ್ಟ ಎದುರಾಗಿದ್ದಲೇ ಈ ಮಕ್ಕಳ ಪೋಷಕರು ಹಿರಿಯ ಮಗನನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿಸುವ ಬಗ್ಗೆ ಯೋಚಿಸಿದ್ದರು. ಜತೆಗೆ ಎರಡನೇ ಮಗನನ್ನು ಶಾಲೆಯಿಂದಲೇ ಬಿಡಿಸುವ ಬಗ್ಗೆ ವಿಚಾರ ಮಾಡುತ್ತಿದ್ದರು. ಅಷ್ಟರಲ್ಲೇ ದುರಂತ ಸಂಭವಿಸಿದೆ. ಕೆಲವು ದಿನಗಳ ಕಾಲ ಸಂಬಂಧಿಕರು ಇವರಿಗೆ ನೆರವಾದರು. ಬಳಿಕ, ಯಾರೂ ಇಲ್ಲದಂತಾಗಿದೆ.

         ಮೇ ತಿಂಗಳ ಮೊದಲ ವಾರದಲ್ಲಿ ಮಹಾಮಾರಿಗೆ ಇನ್ನೊಂದು ದುರಂತ ಸಂಭವಿಸಿದೆ. 9, 11, 13 ವರ್ಷದ ಮಕ್ಕಳು ತಮ್ಮ ಇಬ್ಬರು ಪೋಷಕರನ್ನು ಕಳೆದುಕೊಂಡಿದ್ದಾರೆ. ಬಾಡಿಗೆ ಮನೆಯಲ್ಲಿ ಇವರು ವಾಸಿಸುತ್ತಿದ್ದರು. ಪೋಷಕರನ್ನು ಕಳೆದುಕೊಂಡ ಮೇಲೆ ಬಾಡಿಗೆ ಪಾವತಿಸದಿದ್ದಕ್ಕೆ ಮನೆ ಖಾಲಿ ಮಾಡುವಂತೆ ಮಾಲೀಕ ಒತ್ತಾಯಿಸುತ್ತಿದ್ದಾರೆ. ಅದೃಷ್ಟವಶಾತ್‌, ಈ ಮಕ್ಕಳ ಚಿಕ್ಕಪ್ಪ ಈಗ ಆಸರೆಯಾಗಿದ್ದು, ಮೂವರ ಜವಾಬ್ದಾರಿ ಹೊರುವುದಾಗಿ ತಿಳಿಸಿದ್ದಾರೆ.

ಈ ರೀತಿಯ ಸಂಕಷ್ಟಕ್ಕೆ ಒಳಗಾಗುವ ಮಕ್ಕಳಿಗೆ ನೆರವಾಗುವ ಕಾರ್ಯವನ್ನು ಬಚಪನ್‌ ಬಚಾವೋ ಆಂದೋಲನ (ಬಿಬಿಎ) ಸಂಸ್ಥೆ ಕೈಗೊಂಡಿದೆ. ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಬಿಬಿಎ ನೇತೃತ್ವ ವಹಿಸಿಕೊಂಡಿದ್ದಾರೆ.

         'ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳಿಗೆ ಆಹಾರ ಮತ್ತು ಆಶ್ರಯ ನೀಡಲು ನಮ್ಮ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಆದರೆ, ನಮ್ಮ ಸಂಸ್ಥೆಯು ಸಹ ಹಲವಾರು ಇತಿಮಿತಿಗಳ ನಡುವೆಯೇ ಕಾರ್ಯನಿರ್ವಹಿಸಬೇಕಾಗಿದೆ. ಹೀಗಾಗಿ, ಈ ಮಕ್ಕಳಿಗೆ ದೀರ್ಘಾವಧಿಯ ನೆರವು ನೀಡುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದೇವೆ' ಎಂದು ಬಿಬಿಎ ನಿರ್ದೇಶಕ ಮನಿಷ್‌ ಶರ್ಮಾ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries