ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದ ಆರೋಪಿಗಳ ಪತ್ನಿಯರ ಸರ್ಕಾರಿ ನೇಮಕವನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಒತ್ತಾಯಿಸಿದ್ದಾರೆ. ಸಿಪಿಎಂ ತನ್ನದೇ ಪಕ್ಷದ ಜನರನ್ನು ಸರ್ಕಾರಿ ಸಂಸ್ಥೆಗಳಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದೆ. ಆರೋಪಿಗಳ ಪತ್ನಿಯರಿಗೆ ಉದ್ಯೋಗ ನೀಡುವ ಮೂಲಕ ಪಕ್ಷದ ನಾಯಕತ್ವದ ಸ್ಪಷ್ಟ ತಿಳುವಳಿಕೆಯಿಂದಲೇ ಕೊಲೆ ನಡೆದಿರುವುದು ಸ್ಪಷ್ಟವಾಗಿದೆ ಎಂದು ಅವರು ತಿಳಿಸಿರುವರು.
ಪೆರಿಯ ಅವಳಿ ಕೊಲೆ ಪ್ರಕರಣದ ಮೂವರು ಆರೋಪಿಗಳ ಪತ್ನಿಯರಿಗೆ ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ಉದ್ಯೋಗ ನೀಡಲಾಗಿದೆ. ಸಂದರ್ಶನ ಮಾಡಿದ 100 ಮಂದಿ ಜನರಲ್ಲಿ ನಾಲ್ವರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಅವರಲ್ಲಿ ಮೂವರು ಕೊಲೆ ಪ್ರಕರಣದ ಆರೋಪಿಗಳ ಪತ್ನಿಯರು. ಅವರನ್ನು ಆರು ತಿಂಗಳ ಕಾಲ ಆಸ್ಪತ್ರೆಯ ಸ್ವೀಪರ್ ಸ್ಥಾನಕ್ಕೆ ನಿಯೋಜಿಸಲಾಗಿದೆ.
ಕಾಲ್ಯಾಟ್ ನ ಮಾಜಿ ಯುವ ಕಾಂಗ್ರೆಸ್ ಕಾರ್ಯಕರ್ತ ಕೃಪೇಶ್ ಮತ್ತು ಶರತ್ ಲಾಲ್ ಅವರ ಕೊಲೆ ಪ್ರಕರಣದ ಆರೋಪಿಗಳ ಪತ್ನಿಯರಿಗೆ ಈ ನೇಮಕಾತಿ ಮಾಡಲಾಗಿದೆ. ವಿವಾದದ ಬಳಿಕ, ಯುವ ಕಾಂಗ್ರೆಸ್ ಕೂಡ ಪ್ರತಿಭಟನೆಯ ವ್ಯಕ್ತಪಡಿಸಿದೆ. ಆದರೆ ಅಧಿಕಾರಿಗಳು ಮೊದಲು ಬಂದ ಅರ್ಜಿ ಪರಿಗಣಿಸಲಾಗಿದೆ ಎಂದು ಸಮರ್ಥನೆ ನೀಡಿದೆ.





