ನವದೆಹಲಿ: ಕೊವಿನ್ ಡಿಜಿಟಲ್ ವೇದಿಕೆಯನ್ನು ಹ್ಯಾಕಿಂಗ್ ಮಾಡಲಾಗಿದೆ ಎಂಬ ಕೆಲವು ಆಧಾರರಹಿತ ಮಾಧ್ಯಮ ವರದಿಗಳಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಅಂತಹ ವರದಿಗಳಲ್ಲಿ ಯಾವುದೇ ಹುರುಳಿಲ್ಲ, ಅವು ಸಂಪೂರ್ಣ ಸುಳ್ಳು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ.
ಆದಾಗ್ಯೂ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಲಸಿಕೆ ಆಡಳಿತದ ಉನ್ನತಾಧಿಕಾರ ಗುಂಪು (ಇಜಿವಿಎಸಿ) ಈ ವರದಿಗಳ ಕುರಿತು ಸಮಗ್ರ ತನಿಖೆಗೆ ಸೂಚಿಸಿದ್ದು, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಂಪ್ಯೂಟರ್ ತುರ್ತು ಸ್ಪಂದನಾ ತಂಡವು ಮಾಧ್ಯಮ ವರದಿಗಳ ಸತ್ಯಾಸತ್ಯತೆ ಕುರಿತು ತನಿಖೆ ನಡೆಸುತ್ತಿದೆ.
ಲಸಿಕೆ ಆಡಳಿತದ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಡಾ. ಆರ್.ಎಸ್. ರ‍್ಮಾ, ಸ್ಪಷ್ಟನೆ ನೀಡಿದ್ದು, ಕೊ-ವಿನ್ ಡಿಜಿಟಲ್ ವೇದಿಕೆಯನ್ನು (ಪರ‍್ಟಲ್) ಹ್ಯಾಕಿಂಗ್ (ಕಳವು) ಮಾಡಲಾಗಿದೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಅಥವಾ ವರದಿಗಳ ಸತ್ಯಾಸತ್ಯತೆ ಪತ್ತೆ ಮಾಡಲು ಕುರಿತು ನಾವು ವಿಶೇಷ ಗಮನ ನೀಡಿದ್ದೇವೆ ಎಂದಿದ್ದಾರೆ.
ಕೊ-ವಿನ್ ಡಿಜಿಟಲ್ ವ್ಯವಸ್ಥೆಯು ಕೋವಿಡ್-೧೯ ಲಸಿಕೆಯ ಸಮಗ್ರ ದತ್ತಾಂಶವನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿ ಸಂರಕ್ಷಿಸಿದೆ. ಅದು ಸಂಪೂರ್ಣ ಡಿಜಿಟಲ್ ವೇದಿಕೆಯಲ್ಲಿದೆ. ಕೊ-ವಿನ್ ದತ್ತಾಂಶವನ್ನು ಕೊ-ವಿನ್ ವ್ಯವಸ್ಥೆ ಅಥವಾ ಪರಿಸರ ಹೊರತುಪಡಿಸಿ ಹೊರಗಿನ ಬೇರೆ ಯಾವುದೇ ಸಂಸ್ಥೆ ಅಥವಾ ಕಂಪನಿ ಜತೆ ಹಂಚಿಕೆ ಅಥವಾ ವಿನಿಮಯ ಮಾಡಿಕೊಂಡಿಲ್ಲ.
ಫಲಾನುಭವಿಗಳ ಪ್ರಾಂತ್ಯಕ್ಕೆ ಸಂಬಂಧಿಸಿದ ದತ್ತಾಂಶ ಸೋರಿಕೆ ಆಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಸುದ್ದಿಯಲ್ಲಿ ಹುರುಳಿಲ್ಲ. ನಾವು ಅಂತಹ ದತ್ತಾಂಶಗಳನ್ನು ಕೊ-ವಿನ್ ನಲ್ಲಿ ಸಂಗ್ರಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.





