HEALTH TIPS

ಆನ್​ಲೈನ್​ ಕ್ಲಾಸ್, ವರ್ಕ್​ ಫ್ರಂ ಜಮಾನದಲ್ಲಿ ಮೊಬೈಲ್ ಡೇಟಾ ಉಳಿತಾಯಕ್ಕೆ 10 ಸೂತ್ರಗಳು

        ನಿಮ್ಮ ಮೊಬೈಲ್​ ಫೋನ್ ಏಕೆ ಡೇಟಾ ಹೆಚ್ಚು ಬಳಸುತ್ತಿದೆ ಎಂದು ಎಂದಾದರೂ ಯೋಚಿಸಿದ್ದೀರಾ? ಪ್ರತಿದಿನದ ಡೇಟಾ ಲಿಮಿಟ್​ ಸದ್ದಿಲ್ಲದೆ ಖಾಲಿಯಾಗುತ್ತಿದೆ. ಏನು ಮಾಡುವುದು ಎಂಬ ಚಿಂತೆ ಕಾಡುತ್ತಿದ್ದೆಯೇ? ಮಕ್ಕಳ ಆನ್​ಲೈನ್ ಕ್ಲಾಸ್ ಮುಗಿದು, ನಿಮ್ಮ ಕೆಲಸಕ್ಕೂ ಬೇಕಿರುವಷ್ಟು ಡೇಟಾ ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಿಮ್ಮದೇ? ಹಾಗಿದ್ದರೆ ನೀವು ಈ ಲೇಖನ ಓದಬೇಕು. ಡೇಟಾ ಉಳಿತಾಯಕ್ಕೆ ನೆರವಾಗುವ, ನೀವು ಅತ್ಯಂತ ಸುಲಭವಾಗಿ ಬಳಸಬಹುದಾದ ಒಂದಿಷ್ಟು ಐಡಿಯಾಗಳು ಇಲ್ಲಿವೆ.

1) ಡೇಟಾ ಹೆಚ್ಚಾಗಿ ಎಲ್ಲಿ ಬಳಕೆಯಾಗುತ್ತಿದೆ: ಮೊಬೈಲ್ ಸೆಟಿಂಗ್​ಗೆ ಹೋಗಿ, ಡೇಟಾ ಯೂಸೇಜ್ ಆಯ್ಕೆ ಮಾಡಿ, ಡೇಟಾ ಸೈಕಲ್ ಹೊಂದಿಸಿಕೊಳ್ಳಿ. ಯಾವ ಆ್ಯಪ್ ಹೆಚ್ಚು ಡೇಟಾ ಬಳಸಿಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಅಂಥ ಆ್ಯಪ್​ಗಳ ಸೆಟಿಂಗ್ಸ್​ ಸರಿಯಾಗಿ ಹೊಂದಿಸಿ, ಡೇಟಾ ಉಳಿತಾಯ ಮಾಡಿ.

 2) ಸ್ಟ್ರೀಮಿಂಗ್ ಎಚ್ಚರ: ಯುಟ್ಯೂಬ್, ಅಮೆಜಾನ್, ಹಾಟ್​ಸ್ಟಾರ್, ನೆಟ್​ಫ್ಲಿಕ್ಸ್ ಸೇರಿದಂತೆ ಯಾವುದೇ ಸ್ಟೀಮಿಂಗ್​ ಪ್ಲಾಟ್​ಫಾರ್ಮ್​ಗಳ ಸೆಟಿಂಗ್ಸ್​ ನೀವು ನಿಮಗೆ ಬೇಕಾದಂತೆ ಹೊಂದಿಸಿಕೊಳ್ಳಬೇಕು.​ ಈ ಆ್ಯಪ್​ಗಳು ಅತ್ಯುತ್ತಮ ಗುಣಮಟ್ಟದ ವಿಡಿಯೊಗಳನ್ನು ಬಳಕೆದಾರರಿಗೆ ಕೊಡಬೇಕೆನ್ನುವ ಉತ್ಸಾಹದಲ್ಲಿ ಡಿಫಾಲ್ಟ್​ ಆಗಿ ಹೆಚ್ಚಿನ ಡೇಟಾ ನುಂಗುತ್ತವೆ. ಎಚ್​ಡಿ ಕ್ವಾಲಿಟಿ ಸ್ಟ್ರೀಮಿಂಗ್​ ಡಿಫಾಲ್ಟ್​ ಸೆಟ್ ಆಗಿದ್ದರೆ ಅಥವಾ ನಿಮ್ಮ ಮೊಬೈಲ್​ನಲ್ಲಿ ಆಟೊ ಸೆಟಿಂಗ್ ಇದ್ದರಂತೂ ಮುಗಿದೇ ಹೋಯಿತು. ನೆಟ್​ವರ್ಕ್​ ವೇಗ ಹೆಚ್ಚಾಗಿದ್ದಾಗ ಅತ್ಯುನ್ನತ ಗುಣಮಟ್ಟದ ಸ್ಟ್ರೀಮಿಂಗ್ ಚಾಲ್ತಿಯಲ್ಲಿರುತ್ತೆ. ಇಂಥ ಸಂದರ್ಭದಲ್ಲಿ ಒಂದು ಅಥವಾ ಎರಡು ಜಿಬಿ ಡೇಟಾ ಒಂದು ಸಿನಿಮಾ ನೋಡುವಷ್ಟರಲ್ಲಿ ಖರ್ಚಾಗಿ ಹೋಗಿರುತ್ತೆ. ಇದನ್ನು ನಿರ್ವಹಿಸಲು ಆಯಾ ಆ್ಯಪ್​ಗಳ ಸೆಟಿಂಗ್​ಗಳಲ್ಲಿ ಬದಲಾವಣೆ ಮಾಡಿಕೊಳ್ಳಿ. ಯುಟ್ಯೂಬ್​ನಲ್ಲಿ ಪ್ರತಿ ವಿಡಿಯೊಗೂ ಹೀಗೆ ಮಾಡಿಕೊಳ್ಳಬಹುದು. ಅಮೆಜಾನ್, ಹಾಟ್​ಸ್ಟಾರ್ ಮತ್ತು ನೆಟ್​ಫ್ಲಿಕ್​ನಲ್ಲಿ ಒಟ್ಟಾರೆ ಸೆಟಿಂಗ್ಸ್​ ಬದಲಿಸಿಕೊಳ್ಳಲು ಅವಕಾಶವಿದೆ.

3) ಹಾಟ್​ಸ್ಪಾಟ್ / ಡೌನ್​ಲೋಡ್​ ಜಾಣತನ: ಒಂದು ಮನೆಯಲ್ಲಿ ನಾಲ್ಕು ಜನರಿದ್ದರೆ ಈಗ ನಾಲ್ಕು ಮೊಬೈಲುಗಳಿರುತ್ತವೆ. ಕೆಲವರಿಗೆ ಹೆಚ್ಚು ಡೇಟಾ ಬಳಕೆ ಅಗತ್ಯವಿರುವುದಿಲ್ಲ. ಉದಾಹರಣೆಗೆ ನಿಮ್ಮ ಮನೆಯಲ್ಲಿ ಅಜ್ಜ ಅಜ್ಜಿ ಇರಬಹುದು. ಈಗ ವರ್ಷದ ಲೆಕ್ಕದಲ್ಲಿ ಪ್ರತಿದಿನ 2 ಜಿಬಿ ಡೇಟಾ ಬರುವಂತೆ ರಿಚಾರ್ಜ್ ಮಾಡಿಸಿಕೊಳ್ಳುವುದು ಟ್ರೆಂಡ್ ಆಗಿದೆ. ನಿಮ್ಮ ಮನೆಯಲ್ಲಿ ಇಂಥವರಿದ್ದಾಗ ಅವರ ಮೊಬೈಲ್​ಗಳಲ್ಲಿ ಹಾಟ್​ಸ್ಟಾಪ್ ಮೂಲಕ ನಿಮ್ಮ ಡಿವೈಸ್​ಗೆ ವಿಡಿಯೊ, ಸಿನಿಮಾ ಡೌನ್​ಲೋಡ್ ಮಾಡಿಕೊಳ್ಳಬಹುದು. ಮಕ್ಕಳ ಆನ್​ಲೈನ್ ಕ್ಲಾಸ್​ಗೂ ಇಂಥದ್ದೇ ತಂತ್ರ ಅನುಸರಿಸಬಹುದು. ವಿಡಿಯೊಗಳನ್ನು ಡೌನ್​ಲೋಡ್​ ಮಾಡುವಾಗ ಅದರಲ್ಲಿಯೂ ದಿ ಬೆಸ್ಟ್ ಎನ್ನುವ ಹಂತಕ್ಕಿಂತ ಮಧ್ಯಮ ಗುಣಮಟ್ಟದ ವಿಡಿಯೊಗಳನ್ನು ಡೌನ್​ಲೋಡ್ ಮಾಡಿಕೊಳ್ಳಲು ಗಮನ ಕೊಡಿ. ಡೇಟಾ ಉಳಿತಾಯದಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ.

3) ವಾಟ್ಸ್ಯಾಪ್​ ಆಟೊ ಡೌನ್​ಲೋಡ್​ ಡಿಸೇಬಲ್ ಮಾಡಿ: ಎಲ್ಲರ ಫೋನ್​ನಲ್ಲೂ ಈಗ ವಾಟ್ಸ್ಯಾಪ್​ ಇದ್ದೇ ಇರುತ್ತದೆ. ವಾಟ್ಸ್ಯಾಪ್​ನ ಡಿಫಾಲ್ಟ್​ ಸೆಟಿಂಗ್ ಉಳಿಸಿಕೊಳ್ಳುವ ಬದಲು, ನಿಮಗೆ ಬೇಕಾದಂತೆ ಸೆಟಿಂಗ್ಸ್​ ಬದಲಿಸಿಕೊಂಡರೆ ಸಾಕಷ್ಟು ಡೇಟಾ ಉಳಿಸಬಹುದು. ನಿಮ್ಮ ಮೊಬೈಲ್​ನ ವಾಟ್ಸ್ಯಾಪ್​ ಸೆಟಿಂಗ್​ನಲ್ಲಿ ಡೇಟಾ ಅಂಡ್ ಯೂಸೇಜ್​ಗೆ ಹೋಗಿ. ಅದರಲ್ಲಿ ಆಟೊ ಡೌನ್​ಲೋಡ್ ಓಪನ್ ಮಾಡಿ. ಅಲ್ಲಿ ಫೋಟೊ, ವಿಡಿಯೊ, ಆಡಿಯೊ ಮತ್ತು ಡಾಕ್ಯುಮೆಂಟ್​ಗಳು​ ಡಿಫಾಲ್ಟ್​ ಆಗಿ ಆಟೊ ಡೌನ್​ಲೋಡ್​ಗೆ ಆಯ್ಕೆಯನ್ನು ಎನೇಬಲ್ ಮಾಡಿಕೊಂಡಿರುತ್ತೆ. ಅವೆಲ್ಲವನ್ನೂ ಡಿಸೇಬಲ್ ಮಾಡಿಕೊಳ್ಳಿ. ನಿಮಗೆ ಬರುವ ನೂರಾರು ಮೆಸೇಜ್​ಗಳಲ್ಲಿ ನಿರ್ದಿಷ್ಟವಾಗಿ ಯಾವುದಾದರೂ ಇಮೇಜ್, ವಿಡಿಯೊ, ಆಡಿಯೊ, ಡಾಕ್ಯುಮೆಂಟ್ ಬೇಕಿದ್ದರೆ ಅಂಥವನ್ನು ಮಾತ್ರ ಡೌನ್​ಲೋಡ್ ಮಾಡಿಕೊಳ್ಳಿ. ವಾಟ್ಸಾಪ್ ಬ್ಯಾಕ್​ಅಪ್​ ವಿಚಾರದಲ್ಲಿಯೂ ಇಂಥದ್ದೇ ಜಾಣತನ ಬೇಕಿದೆ. ಕೆಲವರು ಡೈಲಿ ಬ್ಯಾಕ್​ಅಪ್ ಎನೇಬಲ್ ಮಾಡಿಕೊಂಡಿರುತ್ತಾರೆ. ಇದರ ಬದಲು ಓನ್ಲಿ ವೆನ್ ಐ ಟ್ಯಾಪ್ ಬ್ಯಾಕಪ್ ಆಯ್ಕೆ ಬಳಸಿಕೊಳ್ಳುವುದು ಒಳ್ಳೆಯದು.

4) ಪ್ಲೇಸ್ಟೋರ್ ನಿರ್ವಹಣೆ: ಈಚಿನ ದಿನಗಳಲ್ಲಿ ಗೂಗಲ್​ ಪ್ಲೇಸ್ಟೋರ್​ನಲ್ಲಿ ಆಟೊ ಅಪ್​ಡೇಟ್​ ಕೊಟ್ಟು ನೆಮ್ಮದಿಯಾಗಿದ್ದೇವೆ ಅಂದುಕೊಳ್ಳುವವರೇ ಹೆಚ್ಚು. ಆ್ಯಪ್​ಗಳ ಅಪ್​ಡೇಟ್ ಗಮನಿಸಬೇಕಿಲ್ಲ. ಅವು ತನ್ನಿಂತಾನೆ ಅಪ್​ಡೇಟ್ ಆಗುತ್ತಿರುತ್ತವೆ ಎಂದುಕೊಳ್ಳುತ್ತಾರೆ. ಹೊಸ ಅಪ್​ಡೇಟ್ ಬಂದಾಗ ಇಂಥ ಅಪ್​ಡೇಟ್​ಗಳು ತಾವಾಗಿಯೇ ಇನ್​ಸ್ಟಾಲ್ ಆಗುವುದು ನಿಜ. ಆದರೆ ಇಂಥ ಸಂದರ್ಭದಲ್ಲಿ ಸಾಕಷ್ಟು ಡೇಟಾ ಖಾಲಿಯಾಗುತ್ತದೆ. ಕೆಲ ಆ್ಯಪ್​ಗಳ ಅಪ್​ಡೇಟ್​ಗಳಂತೂ 100 ಎಂಬಿಗಟ್ಟಲೆ ಇರುತ್ತದೆ. ನಿಮಗೆ ಮೊಬೈಲ್ ಡೇಟಾ ಉಳಿಸಿಕೊಳ್ಳಬೇಕು ಎಂಬ ಆಸೆಯಿದ್ದರೆ ಆಟೊ ಅಪ್​ಡೇಟ್​ ಡಿಸೇಬಲ್ ಮಾಡಿಕೊಳ್ಳಿ. ನಿಮಗೆ ಬೇಕಿದ್ದಾಗ, ಬೇಕೆನಿಸಿದ ಆ್ಯಪ್​ಗಳನ್ನು ಅಪ್​ಡೇಟ್ ಮಾಡಿಕೊಳ್ಳಿ.

5) ಕ್ಲೌಡ್​ ನಿರ್ವಹಣೆ: ಗೂಗಲ್​ಡ್ರೈವ್, ಗೂಗಲ್ ಫೋಟೊಸ್, ಡ್ರಾಪ್​ಬಾಕ್ಸ್​ ಸೇರಿದಂತೆ ಹಲವು ಆ್ಯಪ್​ಗಳು ಮೊಬೈಲ್​ನಲ್ಲಿರುವ ಎಲ್ಲ ಇಮೇಜ್ ಅಥವಾ ಇತರ ಡೇಟಾಗಳನ್ನು ಸಿಂಕ್ ಮಾಡಿಕೊಳ್ಳುತ್ತಿರುತ್ತವೆ. ಇಂಥ ಆ್ಯಪ್​ಗಳ ಸೆಟಿಂಗ್​ ಪರಿಶೀಲಿಸಿ, ಆಟೊ ಸಿಂಕ್ ಡಿಸೇಬಲ್ ಮಾಡಿ. ನಿಮಗೆ ಬೇಕೆನಿಸಿದ ಡೇಟಾವನ್ನು ಮಾತ್ರ ಬೇಕೆನಿಸಿದಾಗ ಕ್ಲೌಡ್​ಗೆ ಸಿಂಕ್ ಮಾಡಿಕೊಳ್ಳಿ.

6) ಹಾಟ್​ಸ್ಪಾಟ್: ನಿಮ್ಮ ಮೊಬೈಲ್​ ಅನ್ನು ಹಾಟ್​ಸ್ಪಾಟ್ ರೀತಿಯಲ್ಲಿ ಬಳಸುವಾಗ ಅದಕ್ಕೆ ಸಂಪರ್ಕಗೊಳ್ಳುವ ಇತರ ಸಾಧನಗಳು ವೈಫೈ ಮೂಲಕ ಸಂಪರ್ಕಗೊಂಡಂತೆ ಡೇಟಾ ನುಂಗುತ್ತವೆ. ಏಕೆಂದರೆ ಆಗ ಆ ಡಿವೈಸ್​ಗಳಲ್ಲಿರುವ ಡೇಟಾ ಸೆಟಿಂಗ್​ ಸೆಲ್ಯುಲಾರ್​ಗೆ ಬದಲಾಗಿ ವೈಫೈ ಸೆಟಿಂಗ್ಸ್​ ಎನೇಬಲ್ ಮಾಡಿಕೊಂಡು ಅದೇ ರೀತಿಯಲ್ಲಿ ಡೇಟಾ ಬಳಸುತ್ತಿರುತ್ತವೆ. ಹೀಗಾಗಿ ನಿಮ್ಮ ಮೊಬೈಲ್​ ಹಾಟ್​ಸ್ಪಾಟ್​ಗೆ ಸಂಪರ್ಕ ಹೊಂದುವ ಸಾಧನಗಳ ವಿಚಾರದಲ್ಲಿಯೂ ಎಚ್ಚರವಿರಬೇಕು. ವೈಫೈ ಕನೆಕ್ಟ್ ಆದ ತಕ್ಷಣ ಈ ಸಾಧನಗಳಲ್ಲಿ ಆಟೊ ಡೌನ್​ಲೋಡ್ ಅಥವಾ ಆ್ಯಪ್​ ಅಪ್​ಡೇಟ್ ಶುರುವಾದರೆ ನಿಮ್ಮ ಬಳಕೆಗೆ ಡೇಟಾ ಉಳಿಯುವುದೇ ಇಲ್ಲ. ಇಂಥ ಸಾಧನೆಗಳಲ್ಲಿಯೂ ಆಟೊ ಅಪ್​ಡೇಟ್ ನಿಷ್ಕ್ರಿಯಗೊಳಿಸುವುದು ಅಗತ್ಯ.

7) ಡೇಟಾ ಸೇವರ್ ಎನೇಬಲ್ ಮಾಡಿ: ಬಹುತೇಕ ಆಂಡ್ರಾಯ್ಡ್​ ಫೋನ್​ಗಳಲ್ಲಿ ಡೇಟಾ ಸೇವರ್ ಆಯ್ಕೆ ಇರುತ್ತದೆ. ನೀವು ನಿಮ್ಮ ಮೊಬೈಲ್ ಬಳಕೆ ಮಾಡದಿದ್ದಾಗ ಅಂದ್ರೆ ಸ್ಲೀಪ್​ ಮೋಡ್​ನಲ್ಲಿದ್ದಾಗ ಬ್ಯಾಕ್​ಗ್ರೌಂಡ್​ನಲ್ಲಿ ಆ್ಯಪ್​ಗಳು ರಿಫ್ರೆಶ್​ ಆಗಿ ಡೇಟಾ ಖಾಲಿಯಾಗುವುದನ್ನು ಈ ಆಯ್ಕೆ ತಡೆಯುತ್ತದೆ.

8) ಆಟೊ ಸಿಂಕ್ ಡಿಸೇಬಲ್ ಮಾಡಿ: ಬಹುತೇಕ ಮೊಬೈಲ್ ಫೋನ್​​ಗಳಲ್ಲಿ ಆಟೊ ಸಿಂಕ್ ಎನೇಬಲ್ ಆಗಿರುತ್ತದೆ. ನಿಮಗೆ ಒಂದು ವೇಳೆ ಹಳೆಯ ಫೋನ್ ಬದಲಿಸಬೇಕಾದಾಗ ಅದರಲ್ಲಿರುವ ಡೇಟಾ ಮತ್ತು ಸೆಟಿಂಗ್​ ಹೊಸ ಫೋನ್​ಗೂ ತನ್ನಿಂತಾನೆ ಸಿಂಕ್ ಮಾಡಿಕೊಡುವ ಸೌಕರ್ಯವನ್ನು ಇದು ಕಲ್ಪಿಸುತ್ತದೆ. ಈ ಆಯ್ಕೆಯೂ ಸಾಕಷ್ಟು ಡೇಟಾ ನುಂಗುತ್ತದೆ. ನಿಮ್ಮ ಆಂಡ್ರಾಯ್ಡ್​ ಫೋನ್​ಗಳಲ್ಲಿ ಆಟೊ ಸಿಂಕ್ ಡಿಸೇಬಲ್ ಮಾಡಿಕೊಂಡಿರುವುದು ಜಾಣತನ. ನಿಮಗೆ ಬೇಕೆನಿಸಿದಾಗ ಇದನ್ನು ಏನೇಬಲ್ ಮಾಡಿಕೊಂಡು ಸಿಂಕ್ ಮಾಡಿಕೊಳ್ಳಬಹುದು.

9) ವಾರ್ನಿಂಗ್ ಲಿಮಿಟ್​ ಸೆಟ್ ಮಾಡಿ: ಮೊಬೈಲ್ ಡೇಟಾ ಒಂದು​ ನಿರ್ದಿಷ್ಟ ಮಟ್ಟಕ್ಕೆ ಮುಟ್ಟಿದಾಗ ನಿಮಗೆ ಎಚ್ಚರಿಕೆ ಸಂದೇಶ ಬರುವಂತೆ ವಾರ್ನಿಂಗ್ ಸೆಟ್ ಮಾಡಿಕೊಳ್ಳಿ. ಹೀಗೆ ಮಾಡಿಕೊಳ್ಳುವ ಮೂಲಕ ಮೊಬೈಲ್​ ಡೇಟಾ ಬಳಕೆ ಒಂದು ಹಂತ ದಾಟಿದ ನಂತರ ನಿಮಗೆ ಎಚ್ಚರಿಕೆಯ ಸಂದೇಶ ಬರುತ್ತದೆ. ಆಗ ನೀವು ಎಚ್ಚೆತ್ತುಕೊಂಡು ಡೇಟಾ ಬಳಕೆಯನ್ನು ತಗ್ಗಿಸಿಕೊಳ್ಳಬಹುದು.

10) ಹಾಟ್​ಸ್ಪಾಟ್​ಗಿಂತಲೂ ಟೆದರಿಂಗ್ ಒಳ್ಳೆಯದು: ವರ್ಕ್​ಫ್ರಂ ಹೋಮ್ ಅಥವಾ ಆನ್​ಲೈನ್ ಕ್ಲಾಸ್​ಗೆ ಕಂಪ್ಯೂಟರ್ ಅಥವಾ ಲ್ಯಾಪ್​ಟಾಪ್ ಬಳಸುವವರು ಮೊಬೈಲ್ ಹಾಟ್​ಸ್ಪಾಟ್ ಬಳಸುವುದು ವಾಡಿಕೆ. ಇಂಥ ಸಂದರ್ಭದಲ್ಲಿ ವೈಫೈ ಹಾಟ್​ಸ್ಪಾಟ್​ ಬಳಕೆಗಿಂತಲೂ ಯುಎಸ್​ಬಿ ಟೆದರಿಂಗ್ ಮೂಲಕ ಇಂಟರ್ನೆಟ್ ಸಂಪರ್ಕ ಮಾಡಿಕೊಳ್ಳುವುದು ಒಳ್ಳೆಯದು. ಹೀಗೆ ಮಾಡುವುದರಿಂದ ನಿಮ್ಮ ಮೊಬೈಲ್​ ಡೇಟಾ ಇತರ ಸಾಧನಗಳೊಂದಿಗೆ ಶೇರ್ ಆಗುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

          ಮೇಲಿನ ಹತ್ತು ಅಂಶಗಳ ಜೊತೆಗೆ ಇನ್ನೆರೆಡು ವಿಷಯ ಗಮನಿಸಿ. ಅಗತ್ಯವಿದ್ದಾಗ ಮಾತ್ರ ಮೊಬೈಲ್ ಡೇಟಾ ಆನ್ / ಆಫ್ ಮಾಡಿಕೊಳ್ಳಿ. ಆಟೊ ಸಿಂಕ್ ಆನ್​ / ಆಫ್ ಮಾಡುವುದು ರೂಢಿಮಾಡಿಕೊಳ್ಳಿ. ಬ್ಯಾಕ್​ಗ್ರೌಂಡ್​ ಡೇಟಾ ಯೂಸೇಜ್ ರಿಸ್ಟ್ರಿಕ್ಟ್ ಮಾಡಿಕೊಳ್ಳಿ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries