ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ 16 ರಂದು ಆರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ ಸಭೆ ನಡೆಸಲಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದು, ಕೋವಿಡ್-19 ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಈ ರಾಜ್ಯಗಳಲ್ಲಿನ ಹಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಸಂಖ್ಯೆಯು ಹೆಚ್ಚಳ ಕಂಡಿದೆ ಅಥವಾ ಸಾಮಾನ್ಯವಾಗಿ ಇತರ ರಾಜ್ಯಗಳಲ್ಲಿ ಕಂಡುಬರುವಂತೆ ಸೋಂಕಿನ ಸಂಖ್ಯೆ ಈ ರಾಜ್ಯಗಳಲ್ಲಿ ಇಳಿಕೆಯಾಗಿಲ್ಲ.
ನಿನ್ನೆ ಈಶಾನ್ಯ ರಾಜ್ಯಗಳ ಎಂಟು ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ, ಸಾಂಕ್ರಾಮಿಕವನ್ನು ಹೋಗಲಾಡಿಸುವವರೆಗೂ ಲಸಿಕೆ ಅಭಿಯಾನದ ಅಗತ್ಯವಿದೆ ಎಂದರು.
ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ದೊಡ್ಡ ಜನಸಮೂಹವು ಗಿರಿಧಾಮಗಳು ಮತ್ತು ಮಾರುಕಟ್ಟೆ ಪ್ರದೇಶಗಳಿಗೆ ಬರುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.





