ತಿರುವನಂತಪುರ: ತಿರುವನಂತಪುರಂನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಝಿಕಾ ವೈರಸ್ ದೃಢಪಟ್ಟಿದೆ. ಕೊಯಮತ್ತೂರು ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯ ವೇಳೆ 38 ವರ್ಷದ ವೈದ್ಯರಿಗೆ ವೈರಸ್ ಇರುವುದು ಪತ್ತೆಯಾಗಿದೆ. ಆರೋಗ್ಯ ಸಚಿವ ವೀಣಾ ಜಾರ್ಜ್ ಈ ಕುರಿತು ಪ್ರಕಟಣೆ ನೀಡಿದ್ದಾರೆ.
ಇದಲ್ಲದೆ, 35 ವರ್ಷದ ಪೂಂತುರಾ ನಿವಾಸಿ ಮತ್ತು 41 ವರ್ಷದ ಶಾಸ್ತಾಮಂಗಲಂ ನಿವಾಸಿಗೂ ನಿನ್ನೆ ರೋಗ ಪತ್ತೆಯಾಗಿತ್ತು. ಇದರೊಂದಿಗೆ ರಾಜ್ಯದಲ್ಲಿ 22 ಮಂದಿ ಜನರಿಗೆ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ.
ವೈರಸ್ ಹರಡಿದ ಹಿನ್ನೆಲೆಯಲ್ಲಿ ಮನೆ, ಪರಿಸರ ಮತ್ತು ಸಾರ್ವಜನಿಕ ಸಂಸ್ಥೆಗಳ ಪರಿಸರದಲ್ಲಿ ನೀರು ಕಟ್ಟಿ ನಿಲ್ಲುವುದನ್ನು ತಡೆಯಬೇಕು ಎಂದು ಆರೋಗ್ಯ ಸಚಿವರು ಸಲಹೆ ನೀಡಿರುವರು. ಲಾಕ್ ಡೌನ್ ಅವಧಿಯಲ್ಲಿ ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿರುವ ಸಂಸ್ಥೆಗಳಲ್ಲಿ ಸೊಳ್ಳೆಗಳು ಮೊಟ್ಟೆ ಇಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಬಹಳ ಜಾಗರೂಕರಾಗಿರಿ ಎಂದು ಸಚಿವೆ ಸಲಹೆ ನೀಡಿದ್ದಾರೆ. ಜ್ವರ, ಕೆಂಪು ಕಲೆಗಳು, ಸ್ನಾಯು ನೋವು, ಕೀಲು ನೋವು ಮತ್ತು ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದರೆ ಚಿಕಿತ್ಸೆ ಪಡೆಯಬೇಕು ಎಂದು ಸಚಿವರು ಹೇಳಿದರು.






