ನವದೆಹಲಿ: ಕೊರೋನಾ 2ನೇ ಅಲೆಯಿಂದ ಈಗಷ್ಟೇ ದೇಶದ ಜನತೆ ಸುಧಾರಿಸಿಕೊಳ್ಳುತ್ತಿದ್ದು, ಆಗಲೇ ಒಂದರ ಹಿಂದೆ ಒಂದರಂತೆ ಬೇರೆ ಬೇರೆ ಖಾಯಿಲೆಗಳು ಶುರುವಾಗುತ್ತಿವೆ. ಕೆಲ ದಿನಗಳಿಂದ ಆತಂಕ ಹುಟ್ಟಿಸಿರುವ ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಬಲಿಯಾಗಿದೆ.
ದೆಹಲಿಯ ಏಮ್ಸ್ನಲ್ಲಿ ಹಕ್ಕಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದು ಈ ವರ್ಷ ಹಕ್ಕಿ ಜ್ವರದಿಂದ ಸಾವನ್ನಪ್ಪಿದ ಮೊದಲ ಪ್ರಕರಣವಾಗಿದೆ.
ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನಲ್ಲಿ ಹಕ್ಕಿಜ್ವರದಿಂದ ಬಾಲಕ ಸಾವನ್ನಪ್ಪಿದ್ದು, ಆತಂಕವನ್ನು ಹೆಚ್ಚಿಸಿದೆ.
ಏಮ್ಸ್ನ ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ ಹೆಚ್5ಎನ್1(ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.
ಹರ್ಯಾಣದ ಈ ಬಾಲಕನನ್ನು ಅಧಿಕ ಜ್ವರ ಮತ್ತು ಕಫದ ಕಾರಣದಿಂದ 10 ದಿನಗಳ ಹಿಂದೆ ಏಮ್ಸ್'ಗೆ ದಾಖಲಿಸಲಾಗಿತ್ತು. ಮೊದಲಿಗೆ ಬಾಲಕನ ಪರಿಶೀಲಿಸಿದ ವೈದ್ಯರು, ಕೋವಿಡ್-19 ಸೋಂಕು ತಗುಲಿರಬೇಕು ಎಂದು ಚಿಂತಿಸಿದ್ದರು. ಆದರೆ ಪರೀಕ್ಷೆ ನಡೆಸಿದ ವೇಳೆ ವೈದ್ಯಕೀಯ ವರದಿ ನೆಗೆಟಿವ್ ಎಂದು ಬಂದಿತ್ತು. ನಂತರ ಆಳವಾದ ಸಂಶೋಧನೆ ಕೈಗೊಂಡಾಗ ಹಕ್ಕಿಜ್ವರಕ್ಕೆ ಕಾರಣವಾಗುವ ಇನ್‍ಫ್ಲುಯೆಂಜಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.
ಕಳೆದ ಹದಿನೈದು ವರ್ಷಗಳಿಂದ ಭಾರತದಲ್ಲಿ ಹಕ್ಕಿಜ್ವರ ಕಾಣಿಸಿಕೊಳ್ಳುತ್ತಿದ್ದು, ಮುಖ್ಯವಾಗಿ ಕೋಳಿಗಳನ್ನು ಬಾಧಿಸುತ್ತಿದೆ. ಆದಾಗ್ಯೂ ಈ ರೋಗದಿಂದ ಮನುಷ್ಯರು ಮೃತಪಟ್ಟಿರುವ ನಿದರ್ಶನ ಇದುವರೆಗೆ ವರದಿಯಾಗಿರಲಿಲ್ಲ. ಇದೀಗ ಹಕ್ಕಿ ಜ್ವರದಿಂದ ಬಾಲಕ ಮೃತಪಟ್ಟಿರುವುದು ಸಾರ್ವಜನಿಕ ಆರೋಗ್ಯ ತಜ್ಞರಿಗೆ ಎಚ್ಚರಿಕೆ ಸಂದೇಶ ರವಾನೆಯಾದಂತಾಗಿದೆ.
ಹಕ್ಕಿ ಜ್ವರಕ್ಕೆ ಏವಿಯನ್ ಇನ್ಫ್ಲ್ಯೂಯೆಂಜಾ, ಹೆಚ್5ಎನ್1 ಎಂದೂ ಕರೆಯುತ್ತಾರೆ. ಈ ವೈರಸ್ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಮನುಷ್ಯರಿಗೂ ತಗುಲುತ್ತದೆ. ಹಾಗೇ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇನ್ನು ಹಕ್ಕಿ ಜ್ವರ ಮನುಷ್ಯನಿಗೆ ತಗುಲುವುದು ತೀರ ಅಪರೂಪ. ಆದರೆ ಹಾಗೊಮ್ಮೆ ಕಾಣಿಸಿಕೊಂಡರೆ ಸಾವಿನ ಸಾಧ್ಯತೆ ಶೇ. 60ರಷ್ಟು ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಹಕ್ಕಿಗಳ ಸಂಪರ್ಕಕ್ಕೆ ಬರುವ ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಈ ಸೋಂಕು ಹರಡುತ್ತದೆ. ಇದು ಸಾಂಕ್ರಾಮಿಕವಾಗಿರುವುದರಿಂದ ಸಹಜವಾಗಿಯೇ ಆತಂಕಕ್ಕೆ ಹೆಚ್ಚಾಗುವಂತೆ ಮಾಡಿದೆ. ಆದರೆ, ಸೂಕ್ತ ಮುತುವರ್ಜಿ ವಹಿಸಿದರೆ ಪ್ರಾಣಾಪಾಯ ಎದುರಾಗದಂತೆ ತಡೆಯಬಹುದಾಗಿದೆ.





