HEALTH TIPS

ಕೋವಿಡ್‌ ಕಾಲದಲ್ಲಿ ಆರೋಗ್ಯ ಸಚಿವರ ಬದಲಾವಣೆ: ನೂತನ ಮಂತ್ರಿ ಮನ್ಸುಖ್‌ ಯಾರು?

         ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ಪುನರ್‌ರಚನೆಯ ಅತಿದೊಡ್ಡ ಲಾಭ ಪಡೆದವರಲ್ಲಿ ಗುಜರಾತ್‌ ಮೂಲದ ಸಂಸದ ಮನ್ಸುಖ್‌ ಮಾಂಡವಿಯಾ ಪ್ರಮುಖರು. ಮನ್ಸುಖ್‌ ಈಗ ದೇಶದ ಮಹತ್ವದ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಸಾಯನಿಕಗಳು-ರಸಗೊಬ್ಬರ ಖಾತೆ ಇಲಾಖೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.

       ಇದಕ್ಕೂ ಮುನ್ನ ಬುಧವಾರ ಅವರ ಹುದ್ದೆಯನ್ನು ರಾಜ್ಯ ಸಚಿವ ದರ್ಜೆಯಿಂದ - ಕ್ಯಾಬಿನೆಟ್‌ಗೆ ದರ್ಜೆಗೆ ಪದೋನ್ನತಿ ಮಾಡಲಾಗಿಯಿತು. ಅವರು ಈ ವರೆಗೆ ಬಂದರು ಖಾತೆಯ ಸ್ವತಂತ್ರ ಉಸ್ತುವಾರಿಯನ್ನು ಹೊಂದಿದ್ದರೆ, ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದರು.

       ಈ ವರೆಗೆ ಆರೋಗ್ಯ ಸಚಿವರಾಗಿದ್ದ ಹರ್ಷ ವರ್ಧನ್ ಅವರ ಸ್ಥಾನವನ್ನು ಮನ್ಸುಖ್‌ ಅಲಂಕರಿಸಿದ್ದಾರೆ. ಕರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ನೀತಿಗಳನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರೂ ಹರ್ಷ ವರ್ಧನ್‌ ಅವರನ್ನು ಮಂತ್ರಿ ಪರಿಷತ್‌ನಿಂದ ಕೈಬಿಡಲಾಗಿದೆ. ಕೋವಿಡ್ -19 ಸಾಂಕ್ರಾಮಿಕದ ವಿರುದ್ದ ದೇಶ ಹೋರಾಡುತ್ತಿರುವ ನಡುವೆಯೇ ಆರೋಗ್ಯ ಇಲಾಖೆಯಲ್ಲಿ ಆಗಿರುವ ಈ ಬದಲಾವಣೆಯು ಸಹಜವಾಗಿಯೇ ಪ್ರಾಮುಖ್ಯತೆ ಪಡೆದುಕೊಂಡಿದೆ.

           ಗುಜರಾತ್‌ನ ಸೌರಾಷ್ಟ್ರ ಭಾಗದ ಬಿಜೆಪಿ ನಾಯಕ ಮನ್ಸುಖ್‌ ಮಂಡವಿಯಾ ಅವರು 2016 ರಿಂದ ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ಪ್ರಮುಖ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

      ಮೋದಿ ಅವರ ಮೊದಲ ಸರ್ಕಾರದಲ್ಲಿ ಮನ್ಸುಖ್‌ ಅವರು 2016ರ ಜುಲೈ 5ರಂದು ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆಗ ಅವರನ್ನು ಸಾರಿಗೆ, ರಾಸಾಯನಿಕ-ರಸಗೊಬ್ಬರ ಇಲಾಖೆ ರಾಜ್ಯ ಖಾತೆ ಸಚಿವರನ್ನಾಗಿ ಮಾಡಲಾಗಿತ್ತು. ಮೋದಿ ಅವರ ಎರಡನೇ ಸರ್ಕಾರದಲ್ಲೂ ಅವರನ್ನು ಮಂತ್ರಿಯಾಗಿ ಮುಂದುವರಿಸಲಾಗಿತ್ತು.

         ಭಾವನಗರ ಜಿಲ್ಲೆಯ ಹನೋಲ್ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಮಂಡವಿಯಾ ಅವರು 2012ರಲ್ಲಿ ಮೊದಲಬಾರಿಗೆ ರಾಜ್ಯಸಭೆಗೆ ಆಯ್ಕೆಯಾದರು, 2018ರಲ್ಲಿ ಮರು ಆಯ್ಕೆಯಾಗಿದ್ದಾರೆ. 2002ರಲ್ಲಿ ಗುಜರಾತ್‌ನ ಪಲಿಟಾನ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು, ಅತ್ಯಂತ ಕಿರಿಯ ಶಾಸಕರೆನಿಸಿಕೊಂಡಿದ್ದರು. ಇದಕ್ಕೂ ಹಿಂದೆ ಅವರು ಬಿಜೆಪಿ ಯುವ ಮೋರ್ಚಾ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗಳಲ್ಲಿ ತೊಡಗಿಸಿಕೊಂಡಿದ್ದರು.

          ಬಾಲಕೀಯರ ಶಿಕ್ಷಣ, ವ್ಯಸನ ಜಾಗೃತಿ ಕುರಿತ ಪಾದಯಾತ್ರೆಗಳಿಂದ ಮನ್ಸುಖ್‌ ಮಾಂಡವಿಯಾ ಅವರು ಪ್ರವರ್ಧಮಾನಕ್ಕೆ ಬಂದಿದ್ದರು. ಶಾಸಕರಾಗಿದ್ದಲೇ ಎರಡು ಪಾದಯಾತ್ರೆಗಳನ್ನು ಅವರು ನಡೆಸಿದ್ದರು.

       850 ಔಷಧಗಳನ್ನು ಕೈಗೆಟುಕುವ ದರದಲ್ಲಿ ಪೂರೈಸುವ 5100 ಜನೌಷಧ ಕೇಂದ್ರಗಳನ್ನು ಅವರು ಮಂತ್ರಿಯಾಗಿದ್ದ ಅವಧಿಯಲ್ಲಿ ಸ್ಥಾಪಿಸಿದ್ದಾರೆ. ಇದರ ಜೊತೆಗೆ ಹೃದಯ ಸ್ಟಂಟ್‌ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries