ಕಾಸರಗೋಡು: ಕೀಯೂರು ಕಡಪ್ಪುರದ ಅಳಿವೆಯಲ್ಲಿ ಮೀನುಗಾರಿಕೆ ದೋಣಿ ಮಗುಚಿಬಿದ್ದು, ಅದರಲ್ಲಿದ್ದ ಮೂವರು ಮೀನು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇತರ ನಾಲ್ಕು ಮಂದಿ ಗಾಯಗೊಂಡಿದ್ದು, ಇವರನ್ನು ಸಹ ಕಾರ್ಮಿಕರು ರಕ್ಷಿಸಿ ದಡ ಸೇರಿಸಿದ್ದಾರೆ. ಕಸಬಾ ಕಡಪ್ಪುರ ನಿವಾಸಿಗಳಾದ ಸಂದೀಪ್(34), ರತೀಶನ್(25) ಹಾಗೂ ಕಾತಿಕ್(22)ನಾಪತ್ತೆಯಾದ ಕಾರ್ಮಿಕರು. ಅಪಘಾತದಿಂದ ದೋಣಿಗೆ ಹಾನಿಯುಂಟಾಗಿದೆ.
ಭಾನುವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು, ಅಡ್ಕತ್ತಬೈಲ್ ನಿವಾಸಿ ಬಿ. ಮಣಿಕುಟ್ಟನ್, ಕೋಟಿಕುಳಂ ಕಡಪ್ಪುರ ನಿವಾಸಿ ರವಿ, ನೆಲ್ಲಕುನ್ನು ನಿವಾಸಿ ಶಶಿ, ಹಾಗೂ ಕಸಬಕಡಪ್ಪುರ ನಿವಾಸಿ ಶಿಬಿನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಾಪತ್ತೆಯಾದವರಲ್ಲಿ ಒಪಬ್ಬ ಕಾರ್ಮಿಕ ಸೀಮೆಎಣ್ಣೆ ಕ್ಯಾನ್ ಹಿಡಿದು ದಡಸೇರಲು ಯತ್ನಿಸಿದರೂ, ಬಲವಾದ ಅಲೆಗೆ ಸಿಲುಕಿ ಮತ್ತೆ ನಾಪತ್ತೆಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಡಿವೈಎಸ್‍ಪಿ ಬಾಲಕೃಷ್ಣನ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಮುಂದುವರಿಸಿದೆ. ಕರಾವಳಿ ಠಾಣೆ ಪೊಲೀಸರು, ಮೀನುಗಾರಿಕಾ ದಳದ ಸಿಬ್ಬಂದಿ ಹುಡುಕಾಟ ಕಾರ್ಯ ಮುಂದುವರಿಸಿದ್ದು, ಬೇಪೂರ್, ಕೊಚ್ಚಿಯಿಂದ ಹೆಚ್ಚಿನ ರಕ್ಷಣಾ ರಕ್ಷಣಾ ದೋಣಿಗಳನ್ನು ತರಿಸಲಾಗುವುದು ಎಂದು ಡಿವೈಎಸ್‍ಪಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಶಾಸಕ ಎನ್.ಎ ನೆಲ್ಲಿಕುನ್ನು, ಬಿಜೆಪಿ ಮುಖಂಡರಾದ ಕೆ.ಶ್ರೀಕಾಂತ್, ಪಿ.ರಮೇಶ್ ಮುಂತಾದವರು ಭೇಟಿ ನೀಡಿದರು.






