ಕೊಚ್ಚಿ: ಸಾಕು ಪ್ರಾಣಿಗಳಿಗೆ ಪರವಾನಗಿ ಪಡೆಯಲು ಹೈಕೋರ್ಟ್ ಆದೇಶಿಸಿದೆ. ನಾಯಿಗಳು, ಬೆಕ್ಕುಗಳು ಮತ್ತು ಜಾನುವಾರುಗಳು ಸೇರಿದಂತೆ ಎಲ್ಲಾ ಸಾಕು ಪ್ರಾಣಿಗಳನ್ನು ಸಾಕಲು ಸ್ಥಳೀಯ ಅಧಿಕಾರಿಗಳಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಆರು ತಿಂಗಳೊಳಗೆ ಪರವಾನಗಿ ಪಡೆಯಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ತಿರುವನಂತಪುರಂನ ಆದಿಮಲತ್ತುರಾ ಬೀಚ್‍ನಲ್ಲಿ ಬ್ರೂನೋ ಎಂಬ ಸಾಕು ನಾಯಿಯನ್ನು ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಪಂಚಾಯಿತಿಗಳು ಮತ್ತು ಪುರಸಭೆಗಳು ತಕ್ಷಣವೇ ಪರವಾನಗಿ ಪಡೆಯಬೇಕು ಎಂದು ಸೂಚಿಸಿ ನೋಟಿಸ್ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಸಾಕುಪ್ರಾಣಿಗಳನ್ನು ಖರೀದಿಸುವವರು ಮೂರು ತಿಂಗಳೊಳಗೆ ಪರವಾನಗಿ ಪಡೆಯಬೇಕು ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಅಗತ್ಯವಿದ್ದರೆ ಪರವಾನಗಿ ಶುಲ್ಕವನ್ನು ಸರಿಹೊಂದಿಸಬಹುದು. ಜಸ್ಟೀಸ್ ಎ.ಕೆ ಜಯಶಂಕರನ್ ನಂಬಿಯಾರ್, ಜಸ್ಟೀಸ್ ಪಿ. ಗೋಪಿನಾಥ್ ಎಂಬವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಮರುಸಂಘಟಿಸುವಾಗ ಬೃಹತ್ ಸದಸ್ಯರನ್ನೊಳಗೊಂಡ ಜಂಬೋ ಸಮಿತಿ ಬೇಡವೆಂದೂ ನ್ಯಾಯಾಲಯ ತೀರ್ಪು ನೀಡಿದೆ.


