ಕಾಸರಗೋಡು: ಜಿಲ್ಲೆಯ ವಿವಿಧ ಗ್ರಾಮಗಳ ಸ್ಥಳನಾಮದಲ್ಲಿ ಯಾವುದೇ ಬದಲಾವಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂಬುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ತರಗತಿ ಮುಚ್ಚಿಕೊಂಡಿದ್ದು, ಈ ನಿಟ್ಟಿನಲ್ಲಿ ಆನ್‍ಲೈನ್ ತರಗತಿ ನಡೆಸಲಾಗುತ್ತಿದೆ. ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಸ್ಥಳೀಯ ಚಾನೆಲ್‍ಗಳಲ್ಲಿ ಕನ್ನಡ ಮಾಧ್ಯಮದಲ್ಲೂ ಆನ್‍ಲೈನ್ ತರಗತಿ ಪ್ರಸಾರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಬಾಕಿ ಉಳಿದ ಗೊಂದಲ:
ಕಾಸರಗೋಡು ಜಿಲ್ಲೆಯ ಹಲವು ಗ್ರಾಮಗಳ ಹೆಸರನ್ನು ಈಗಾಗಲೇ ಮಲಯಾಳೀಕರಣಗೊಳಿಸಿ ಸರ್ಕಾರ ನಾಮಫಲಕಗಳನ್ನೂ ಅಳವಡಿಸಿದೆ. ಈ ತಪ್ಪುಗಳನ್ನು ಸರಿಪಡಿಸುವಂತೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೂಲಕ ಕೇರಳ ಸರ್ಕಾರದ ಗಮನ ಸೆಳೆದಿದ್ದರು. ಕಾಸರಗೋಡು ಜಿಲ್ಲೆಯ ಸಾಂಸ್ಕøತಿಕ ಚರಿತ್ರೆ ಹಾಗೂ ಮೌಲ್ಯ ಒಳಗೊಂಡ ಗ್ರಾಮಗಳ ಕೆಲವೊಂದು ಜಾಗದ ಹೆಸರನ್ನು ಬದಲಾಯಿಸಲು ಕೇರಳ ಸರ್ಕಾರ ತೀರ್ಮಾನಿಸಿರುವುದಾಗಿ ನಾನು ಭಾವಿಸುವುದಿಲ್ಲ. ಈ ಜಾಗ ಹಾಗೂ ಗ್ರಾಮ ಒಳಗೊಂಡ ಸ್ಥಳೀಯಾಡಳಿತ ಸಂಸ್ಥೆಗಳ ಏಕಪಕ್ಷೀಯ ತೀರ್ಮಾನವಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ಸರ್ಕಾರ ಗಮನ ಹರಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದರು.
ಸ್ಥಳನಾಮ ಬದಲಾವಣೆಗೆ ಕೇರಳ ಸರ್ಕಾರ ಅಧಿಕೃತ ಆದೇಶ ಹೊರಡಿಸದಿದ್ದರೂ, ಕೆಲವು ಅಧಿಕಾರಿಗಳ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳ ಏಕಪಕ್ಷೀಯ ತೀರ್ಮಾನದಿಂದ ಬಹಳಷ್ಟು ಹೆಸರುಗಳನ್ನು ತಪ್ಪಾಗಿ ಬರೆಯಲಾಗುತ್ತಿದೆ. ಮಾತ್ರವಲ್ಲ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸರ್ಕರದ ಕಡೆಯಿಂದಲೇ ಈ ತಪ್ಪಾದ ಹೆಸರುಗಳನ್ನೇ ನಾಮಫಲಕದಲ್ಲಿ ಪ್ರಕಟಿಸಲಾಗಿದೆ. ಈ ತಪ್ಪುಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕಾಗಿದ್ದು, ಈ ವಿಷಯವನ್ನೇ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದರು.
ಆದರೆ ಬಹುತೇಕ ರಾಜಕೀಯ ಪಕ್ಷಗಳು ಹಾಗೂ ಕೆಲವೊಂದು ಸಂಘಟನೆಗಳು ತಪ್ಪು ಮಾಹಿತಿ ಹರಡುತ್ತಿರುವುದಾಗಿಯೂ ಆರೋಪ ಕೇಳಿ ಬರುತ್ತಿದೆ.
ಕಾಸರಗೋಡು ಜಿಲ್ಲೆಯ ಸ್ಥಳನಾಮಗಳು ಸರ್ಕಾರಿ ದಾಖಲೆಗಳಲ್ಲಿ ತಪ್ಪಾಗಿ ಮುದ್ರಣಗೊಳ್ಳುತ್ತಿದ್ದು, ಬಹುತೇಕ ಕನ್ನಡ ಹೆಸರನ್ನು ಮಲಯಾಳೀಕರಣಗೊಳಿಸಲಾಗುತ್ತಿದೆ. ಇದನ್ನು ತಕ್ಷಣ ಸರಿಪಡಿಸುವಂತೆ ಕಾಸರಗೋಡಿನ ಕನ್ನಡ ಸಮನ್ವಯ ಸಮಿತಿ 2015 ಡಿಸೆಂಬರ್ 17ರಂದು ಕೇರಳ ಸರ್ಕಾರಕ್ಕೆ ಮಾಡಿಕೊಂಡ ಮನವಿಯನ್ವಯ ಕೇರಳ ಸರ್ಕಾರ ಹೊರಡಿಸಿದ ಆದೇಶ(ಎಸ್.ಡಿ 2/25/2016)ದಲ್ಲಿ ತಪ್ಪಾಗಿ ಬರೆಯಲಾದ ಸ್ಥಳನಾಮ ಸರಿಪಡಿಸುವಂತೆ ಸ್ಪಷ್ಟವಾಗಿ ತಿಳಿಸಿದ್ದರೂ, ಇನ್ನೂ ಕಾರ್ಯಗತಗೊಂಡಿಲ್ಲ. ತಪ್ಪಾಗಿ ನಮೂದಿಸಿರುವ ಸ್ಥಳನಾಮ ಸರಿಪಡಿಸುವಂತೆ ರಾಜಕೀಯ ಪಕ್ಷಗಳು ಸರ್ಕಾರವನ್ನು ಒತ್ತಾಯಿಸುವ ಕೆಲಸವನ್ನೂ ನಡೆಸುತ್ತಿಲ್ಲ. ಬದಲಾಗಿ ಸ್ಥಳನಾಮದ ಬಗ್ಗೆ ವಿವಾದ ಹುಟ್ಟಿಕೊಳ್ಳುತ್ತಿದ್ದಂತೆ ತಮ್ಮದೇ ಧಾಟಿಯಲ್ಲಿ ಹೇಳಿಕೆ ನೀಡಿ, ಕನ್ನಡಿಗರ ಹೋರಾಟದ ಹಾದಿ ತಪ್ಪಿಸುತ್ತಿರುವುದಾಗಿ ಸಂಶಯಿಸಲಾಗಿದೆ.


