ಉಪ್ಪಳ: ಕಾಸರಗೋಡು ಜಿಲ್ಲೆಯ ಅತ್ತ್ಯುರದ ಜನರ ಬಹು ದಶಕಗಳ ಬೇಡಿಕೆಯಾದ ಮಂಜೇಶ್ವರ ತಾಲೂಕು ರಚನೆಗೊಂಡು 8 ವರ್ಷಗಳು ಸಂದು ಹೋದರೂ ಇನ್ನೂ ಸಮಸ್ಯೆಗಳ ಸಂಕೋಲೆಗಳಿಂದ ಹೊರಬಂದಿಲ್ಲ. ಮಂಜೇಶ್ವರ ತಾಲೂಕು ಕಚೇರಿ ಹಲವು ವರ್ಷಗಳಿಂದ ಉಪ್ಪಳದ ಬಸ್ ನಿಲ್ದಾಣದ ಬಳಿಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಹಲವು ಸರ್ಕಾರಿ ಭೂಮಿಗಳು ವ್ಯರ್ಥವಾಗುತ್ತಿದ್ದರೂ ಸ್ವಂತ ಕಟ್ಟಡದ ಭಾಗ್ಯ ಇನ್ನೂ ಪ್ರಾಪ್ತಿಯಾಗಿಲ್ಲ. ಈಗಿರುವ ಬಾಡಿಗೆ ಕಟ್ಟಡದ ಮೇಲಂತಸ್ತಿನಲ್ಲಿ ತಾಲೂಕು ಕಾರ್ಯಾಲಯ ಕಾರ್ಯವೆಸಗುತ್ತಿದ್ದು, ವೃದ್ದರು, ಮಹಿಳೆಯರ ಸಹಿತ ಅ|ಂಗವಿಕಲರಿಗೆ ವ್ಯವಹಾರಕ್ಕೆ ತೀವ್ರ ಸಂಕಷ್ಟಕ್ಕೊಳಗಾಗುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಜೊತೆಗೆ ಇದೀಗ ತಾಲೂಕು ಕಚೇರಿಯ ನಾಮಫಲಕದ ಒಂದು ಭಾಗ ಹಾನಿಗೊಂಡ ಸ್ಥಿತಿಯಲ್ಲಿದೆ. ಮಾತ್ರವಲ್ಲ ಅಕ್ಷರಗಳ ಪೈಂಟ್ ಎದ್ದು ಹೋಗಿ ಮಂಜೇಶ್ವರ ತಾಲೂಕು ಕಚೇರಿ ಎಂಬ ಅಕ್ಷರಗಳು ಮಾಯವಾಗುತ್ತಿದ್ದು, ಹೊಸಬರಿಗೆ ಕಾರ್ಯಾಲಯವನ್ನು ಪತ್ತೆಹಚ್ಚಲು ತೊಡಕಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿರುವುದಾಗಿ ದೂರಲಾಗಿದೆ. ಎರಡನೇ ಅಂತಸ್ತಿಯಲ್ಲಿ ತಾಲೂಕು ಕಚೇರಿ ಕಾರ್ಯಾಚರಿಸುತ್ತಿದೆ. ಚಿಕ್ಕದಾದ ಬೋರ್ಡ್ ಬೇಗನೆ ಗಮನಕ್ಕೆ ಬರುದಿಲ್ಲವೆಂದು ಸಾರ್ವಜನಿಕರು ತಿಳಿಸಿದ್ದಾರೆ. ಅಲ್ಲದೆ ಕಚೇರಿಗೆ ವೃದ್ದರಿಗೆ ಹಾಗೂ ಅಸೌಖ್ಯ ಬಾಧಿತರು ಅತ್ಯಗತ್ಯಕ್ಕೆ ಕಚೇರಿಯ ಮೆಟ್ಟಲನ್ನು ಏರಲು ಕಷ್ಟವನ್ನು ಅನುಭವಿಸುತ್ತಿರುವುದಾಗಿ ದೂರುಗಳು ಕೇಳಿಬರುತ್ತಿದೆ. ಸಂಬಂಧಪಟ್ಟ ಅಧಿಕೃತರು ನಾಮಫಲಕವನ್ನು ನವೀಕರಿಸಿ ಅಳವಡಿಸಲು ಹಾಗೂ ಕೆಳಭಾಗದಲ್ಲಿ ಇರುವಂತ ಕಟ್ಟಡಕ್ಕೆ ಕಛೇರಿಯನ್ನು ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



