ಕಾಸರಗೋಡು: ಟೋಕಿಯೋದಲ್ಲಿ ಜರುಗುವ ಒಲಿಂಪಿಕ್ಸ್ ಪಂದ್ಯಾಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ "ಚಿಯರ್ ಫಾರ್ ಇಂಡಿಯಾ ಸೆಲ್ಫಿ" ಶಿಬಿರ ಆರಂಭಗೊಂಡಿದೆ.
ಜಿಲ್ಲಾ ಒಲಿಂಪಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆಸಲಾಗುತ್ತಿರುವ ಶಿಬಿರವನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಾಸರಗೋಡು ಜಿಲ್ಲೆಯ ಕ್ರೀಡಾ ವಲಯ ಎದುರಿಸುತ್ತಿರುವ ಸೌಲಭ್ಯಗಳ ಕೊರತೆ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಗ್ರಾಮೀಣ ಮಟ್ಟದ ಕ್ರೀಡಾಪ್ರತಿಭೆಗಳನ್ನು ಪ್ರಧಾನ ವಾಹಿನಿಗೆ ಕರೆತರುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಒಂದೇ ಛಾವಣಿಯಡಿ ತರುವ ಯೋಜನೆ ರಚನೆಗೆ ಯತ್ನಿಸಲಾಗುವುದು ಎಂದು ನುಡಿದರು.
ನಂತರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳುಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ತರಬೇತುದಾತರು ಮೊದಲಾದವರು ಸೆಲ್ಫಿ ಕ್ಲಿಕ್ಕಿಸಿಕೊಂಡರು.





