HEALTH TIPS

ವಿಪಕ್ಷಗಳಿಂದ ಭಾರಿ ಗದ್ದಲ: ಲೋಕಸಭೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ

          ನವದೆಹಲಿಇಂದಿನಿಂದ ಆರಂಭವಾದ ಸಂಸತ್ ನ ಉಭಯ ಕಲಾಪಗಳನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ.

             ಮೊದಲ ದಿನ ಉಭಯ ಸದನಗಳ ಕಲಾಪ ಗದ್ದಲಕ್ಕೆ ಬಲಿಯಾಗಿದ್ದು, ಲೋಕಸಭೆಯಲ್ಲಿ ಪ್ರಧಾನಿ ನೂತನ ಸಚಿವರ ಪರಿಚಯಕ್ಕೆ ಮುಂದಾದಾಗ ವಿರೋಧ ಪಕ್ಷಗಳು ಗದ್ದಲ ಮಾಡಿದವು. ರಾಜ್ಯಸಭೆಯಲ್ಲೂ ಇದೇ ವಿಷಯ ಚರ್ಚಿತವಾಯಿತು. ಹೀಗಾಗಿ ರಾಜ್ಯಸಭೆ ಮತ್ತು ಲೋಕಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

          ಕಲಾಪದಲ್ಲಿ ನೂತನ ಸಚಿವರ ಆಯ್ಕೆ ಕುರಿತು ಪ್ರಧಾನಿ ಮೋದಿ ಅವರು ಮಾತನಾಡಿದ ವೇಳೆ, ವಿರೋಧ ಪಕ್ಷಗಳು ಗದ್ದಲವೆಬ್ಬಿಸಿದವು. ದೇಶದ ಮಹಿಳೆಯರು, ಹಿಂದುಳಿದ ವರ್ಗದ ಹಾಗೂ ರೈತರ ಮಕ್ಕಳು ಸಚಿವರಾಗಿರುವುದು ಒಂದು ವೇಳೆ ಕೆಲವು ಜನರಿಗೆ ಅಸಮಾಧಾನವಾಗಿರಬಹುದು. ಆ ಕಾರಣದಿಂದಾಗಿಯೇ ಅವರ ಪರಿಚಯವನ್ನು ಮಾಡಲು ಕೂಡಾ ವಿಪಕ್ಷಗಳು ಅವಕಾಶ ನೀಡುತ್ತಿಲ್ಲ ಎಂದು ತಿರುಗೇಟು ನೀಡಿದರು.ವಿಪಕ್ಷಗಳು ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕಲಾಪದಲ್ಲಿ ಕೇಳಬಹುದಾಗಿದೆ. ಆದರೆ ಸದನದಲ್ಲಿ ಸರ್ಕಾರ ಉತ್ತರ ನೀಡಲು ವಿಪಕ್ಷಗಳು ಯಾವುದೇ ಗದ್ದಲಕ್ಕೆ ಅವಕಾಶ ನೀಡಬಾರದು ಎಂದು ಪ್ರಧಾನಿ ಮೋದಿ ಕಲಾಪ ಆರಂಭಕ್ಕೂ ಮುನ್ನ ಮನವಿ ಮಾಡಿಕೊಂಡಿದ್ದರು.

                 ಲೋಕಸಭೆಯಲ್ಲಿ ಪೆಗಾಸಸ್ ಕೋಲಾಹಲ
      ಇದೇ ವೇಳೆ ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಕುರಿತಂತೆ ಸಂಸತ್ ನ ಉಭಯ ಸದನಗಳಲ್ಲಿ ಗದ್ದಲವೇರ್ಪಟ್ಟಿತು. ಈ ವೇಳೆ ಮಾತನಾಡಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಹಿಂದೆ, ವಾಟ್ಸಾಪ್ ನಲ್ಲಿ ಪೆಗಾಸಸ್ ಬಳಕೆಗೆ ಸಂಬಂಧಿಸಿದಂತೆ ಇದೇ ರೀತಿಯ ಆರೋಪಗಳನ್ನು ಮಾಡಲಾಗಿತ್ತು. ಆ ವರದಿಗಳಿಗೆ ಯಾವುದೇ ವಾಸ್ತವಿಕ ಆಧಾರವಿರಲಿಲ್ಲ. ಜುಲೈ 18 2021 ರ ಪತ್ರಿಕಾ ವರದಿಗಳು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸುಸ್ಥಾಪಿತ ಸಂಸ್ಥೆಗಳನ್ನು ಕೆಣಕುವ ಪ್ರಯತ್ನವೆಂದು ತೋರುತ್ತದೆ. ಹೆಚ್ಚು ಸಂವೇದನಾಶೀಲ ಕಥೆಯನ್ನು ಕಳೆದ ರಾತ್ರಿ ವೆಬ್ ಪೋರ್ಟಲ್ ಪ್ರಕಟಿಸಿದೆ. ಈ ಕಥೆಯ ಸುತ್ತಲೂ ಅನೇಕ ಆರೋಪಗಳು ಕೇಳಿ ಬರುತ್ತಿವೆ. ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಒಂದು ದಿನ ಮೊದಲು ಪತ್ರಿಕಾ ವರದಿಗಳು ಪ್ರಕಟವಾಗಿವೆ ಎಂದು ಹೇಳುವ ಮೂಲಕ ವರದಿಯ ಹಿಂದೆ ಕಾಣದ ಕೈಗಳ ಕೈವಾಡವಿರಬಹುದು ಎಂದು ಸಚಿವರು ಶಂಕಿಸಿದ್ದಾರೆ.

          ಈ ವೇಳೆ ವಿಪಕ್ಷಗಳ ಸದಸ್ಯರು ಗದ್ದಲ ಮುಂದುವರೆಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

                           ನೂತನ ಸಂಸದರಿಗೆ ಪ್ರಮಾಣ ವಚನ
      ಸದನ ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಸಂಸತ್‌ ಸದಸ್ಯರಾಗಿ ಆಯ್ಕೆಯಾದ ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಮದ್ದಿಲಾ ಗುರುಮೂರ್ತಿ, ಬಿಜೆಪಿಯ ಮಂಗಳಾ ಸುರೇಶ್ ಅಂಗಡಿ, ಐಯುಎಂಎಲ್‌ನ ಅಬ್ದುಸಮದ್ ಸಮಾದಾನ್ ಮತ್ತು ಕಾಂಗ್ರೆಸ್ ಪಕ್ಷದ ವಿಜಯಕುಮಾರ್ ಅಲಿಯಾಸ್ ವಿಜಯ ವಸಂತ್ ಅವರು ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

          ಬಳಿಕ ನೂತನ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಸಚಿವರಾದ ಹಿನ್ನೆಲೆ ಸಂಸತ್ತಿನಲ್ಲಿ ಉತ್ಸಾಹ ಹೆಚ್ಚಾಗಿರುತ್ತದೆ ಎಂದು ನಾನು ಭಾವಿಸಿದ್ದೇನೆ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆಯ ಒಬಿಸಿ ಸಮುದಾಯದ ನಮ್ಮ ಸಹೋದ್ಯೋಗಿಗಳಿಗೆ ಮಂತ್ರಿ ಸ್ಥಾನ ನೀಡಲಾಗಿದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries