ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಖಚಿತ ಗಣನೆ (ಟಿ.ಪಿ.ಆರ್) ಹೆಚ್ಚಳ ನಿಯಂತ್ರಣಕ್ಕೆ ಪ್ರಬಲ ಕ್ರಮ ಕೈಗೊಳ್ಳಲು ಮತ್ತು ವಾಕ್ಸಿನೇಷನ್ ಪ್ರಕ್ರಿಯೆ ಚುರುಕುಗೊಳಿಸಲು ತೀರ್ಮಾನಿಸಲಾಗಿದೆ.
ಜಿಲ್ಲೆಯ ಉಸ್ತುವಾರಿ ಹೊಂದಿರುವ ಬಂದರು-ವಸ್ತು ಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ಅವರ ಅಧ್ಯಕ್ಷತೆಯಲ್ಲಿ ಆನ್ ಲೈನ್ ರೂಪದಲ್ಲಿ ಜರುಗಿದ ಜನಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ಕಲಿಕೆ ನಡೆಸುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆಯಲ್ಲಿ ಆದ್ಯತೆ ನೀಡಲಾಗುವುದು. ಮೊದಲ ಡೋಸ್ ವಾಕ್ಸಿನೇಷನ್ ಪಡೆಯುವ ವೇಳೆ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಲಾಗುವುದು. "ಡಿ" ಕ್ಯಾಟಗರಿಯಲ್ಲಿರುವ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮೊಬೈಲ್ ಯೂನಿಟ್ ಗಳನ್ನು ಬಳಸಿ ಕೋವಿಡ್ ತಪಾಸಣೆ ನಡೆಸಲಾಗುವುದು. ಸರಕಾರಿ ಸಿಬ್ಬಂದಿ, ವ್ಯಾಪಾರಿಗಳು, ಸಾರ್ವಜನಿಕರೊಂದಿಗೆ ಸತತ ಸಂಪರ್ಕ ಹೊಂದುವ ಮಂದಿಗೆ 2 ತಿಂಗಳಿಗೊಮ್ಮೆ ಕೋವಿಡ್ ತಪಾಸಣೆ ನಡೆಸಬೇಕು ಎಂದು ಸಭೆ ತಿಳಿಸಿದೆ.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ನ್ಯಾಯವಾದಿ ಸಿ.ಎಚ್. ಕುಂಞಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಅತುಲ್ ಎಸ್.ನಾಥ್, ಡಿ.ಡಿ.ಇ. ಕೆ.ವಿ.ಪುಷ್ಪಾ, ಎ.ಎಸ್.ಪಿ. ಹರಿಶ್ಚಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಜಿಲ್ಲೆಯ ಉಸ್ತವಾರಿ ವಿಶೇಷ ಅಧಿಕಾರಿ ಪಿ.ಬಿ.ನೂಹ್ ಕೋವಿಡ್ ಪ್ರತಿರೋಧ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

