HEALTH TIPS

ಅಸ್ಸಾಂ-ಮಿಜೋರಾಂ ನಡುವೆ ಏಕೆ ಸಂಘರ್ಷ? ಬ್ರಿಟಿಷ್‌ ಕಾಲದಿಂದ ಜೀವಂತ

                ನವದೆಹಲಿ: ಇದು ಭಾರತ ಮತ್ತು ನೆರೆಯ ದೇಶಗಳ ನಡುವಿನ ಗಡಿ ಸಂಘರ್ಷವಲ್ಲ. ನಮ್ಮ ನಡುವೆಯೇ ಜೀವಂತವಾಗಿರುವ ಜಗಳ. ಅಸ್ಸಾಂ ಮತ್ತು ಮಿಜೋರಾಂ ಸರಿಸುಮಾರು 165 ಕಿ.ಮೀ ಉದ್ದದ ಗಡಿ ಹಂಚಿಕೊಂಡಿದ್ದು, ಅದು ಆಗಾಗ ವಿವಾದ, ಸಂಘರ್ಷದ ರೂಪದಲ್ಲಿ ಮೇಲೆದ್ದು ನಿಲ್ಲುತ್ತದೆ. ಈಗ ಆಗಿರುವುದೂ ಅದೇ.

             ಈಶಾನ್ಯದ ಈ ಎರಡೂ ರಾಜ್ಯಗಳ ನಡುವೆ ಸೋಮವಾರ ನಡೆದ ಗಡಿ ಸಂಘರ್ಷದ ವೇಳೆ ಸಂಭವಿಸಿದ ಗುಂಡಿನ ದಾಳಿಯಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ಮತ್ತು ಕಲ್ಲುತೂರಾಟದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಪರಸ್ಪರ ವಾಗ್ವಾದ ನಡೆಸಿದ್ದಾರೆ.

            ಜೀವ ಹಾನಿ ಆಗುವ ಹಂತಕ್ಕೆ ಸಂಘರ್ಷಗಳು ನಡೆಯುವ ಈ ವಿವಾದ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದ್ದು.

              19 ನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರ ಚಹಾ ತೋಟಗಳು ಕಚಾರ್‌ ಪ್ರದೇಶದಲ್ಲಿ (ಹೈಲಕಂಡಿ ಮತ್ತು ಕರಿಮ್‌ಗಂಜ್ ಜಿಲ್ಲೆಗಳನ್ನು ಒಳಗೊಂಡಿರುವ ಪ್ರದೇಶ) ವ್ಯಾಪಿಸಲಾರಂಭಿಸಿದ್ದವು. ಅವುಗಳ ವಿಸ್ತರಣೆಯು ಮಿಜೋರಾಮ್‌ನ ಸ್ಥಳೀಯರಿಗೆ ಸಮಸ್ಯಾತ್ಮಕವಾಗಿ ಪರಿಣಮಿಸಿತ್ತು.

           ಆಗಸ್ಟ್ 1875 ರಲ್ಲಿ ಕಚಾರ್‌ ಜಿಲ್ಲೆಯ ದಕ್ಷಿಣ ಗಡಿಯನ್ನು ಅಸ್ಸಾಂನ ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು. ಲುಶಾಯ್ ಬೆಟ್ಟಗಳು ಮತ್ತು ಕಚಾರ್‌ ಬಯಲು ಪ್ರದೇಶಗಳ ನಡುವಿನ ಗಡಿಯನ್ನು ಗುರುತಿಸುವ ಬ್ರಿಟಿಷರ ಐದನೇ ಪ್ರಯತ್ನ ಅದಾಗಿತ್ತು. ಅದಲ್ಲದೇ ಮಿಜೋರಾಂನ ನಾಯಕರನ್ನು ಸಂಪರ್ಕಿಸಿ ಗುರುತಿಸಲಾದ ಮೊದಲ ಗಡಿ ರೇಖೆ ಅದು ಎಂದು ಮಿಜೋರಾಂ ಹೇಳುತ್ತದೆ. ಮೀಸಲು ಅರಣ್ಯದ ಒಳರೇಖೆ ಗುರುತಿಸಲು ಇದೇ ಆಧಾರವಾಯಿತು ಎನ್ನಲಾಗಿದ್ದು, ಎರಡು ವರ್ಷಗಳ ನಂತರ ಅದನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು.

           1933 ರಲ್ಲಿ ಲುಶಾಯ್ ಹಿಲ್ಸ್ ಮತ್ತು ಅಂದಿನ ರಾಜಮನೆತನವಾದ ಮಣಿಪುರದ ನಡುವಿನ ಗಡಿಯನ್ನು ಗುರುತಿಸಲಾಯಿತು. ಮಣಿಪುರದ ಗಡಿಯು ಲುಶಾಯ್ ಹಿಲ್ಸ್, ಅಸ್ಸಾಂನ ಕಚಾರ್ ಜಿಲ್ಲೆಯಿಂದ ಪ್ರಾರಂಭವಾಗುತ್ತದೆ ಎಂದು ಅದರಲ್ಲಿ ತೋರಿಸಲಾಗಿತ್ತು. ಆದರೆ, ಇದಕ್ಕೆ ಮಿಜೋರಾಂ ವಿರೋಧ ವ್ಯಕ್ತಪಡಿಸಿತು. 1875ರಲ್ಲಿ ರಾಜ್ಯದ ನಾಯಕರನ್ನು ಸಂಪರ್ಕಿಸಿ ರೂಪಿಸಲಾದ ಗಡಿಗುರುತೇ ಸರಿ ಎಂದು ವಾದಿಸಿತು.

           ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ, ಅಸ್ಸಾಂ - ನಾಗಾಲ್ಯಾಂಡ್ (1963), ಅರುಣಾಚಲ ಪ್ರದೇಶ (1972 ), ಮೇಘಾಲಯ (1972), ಮಿಜೋರಾಂ (1972) ಎಂಬ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಯಿತು.

          ಮಿಜೋರಾಂ ಮತ್ತು ಅಸ್ಸಾಂ ನಡುವಿನ ಒಪ್ಪಂದದ ಪ್ರಕಾರ, ಗಡಿ ಪ್ರದೇಶದ ಮಾನವ ರಹಿತ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಫೆಬ್ರವರಿ 2018 ರಲ್ಲಿ ಗಡಿ ಪ್ರದೇಶದ ಅಸ್ಸಾಂನದ್ದು ಎಂದು ಹೇಳಲಾದ ಪ್ರದೇಶದಲ್ಲಿ 'ಮಿಜೋ ಝಿರ್ಲೈ ಪಾವ್ಲ್‌' ಎಂಬ ವಿದ್ಯಾರ್ಥಿ ಸಂಘಟನೆಯ ಸದಸ್ಯರು ರೈತರಿಗಾಗಿ ಮರದ ವಿಶ್ರಾಂತಿ ಗೃಹವನ್ನು ನಿರ್ಮಿಸಿದರು. ಇದು ಸಂಘರ್ಷಕ್ಕೆ ಕಾರಣವಾಯಿತು. ನಂತರದಲ್ಲಿ ವಿಶ್ರಾಂತಿ ಗೃಹವನ್ನು ಅಸ್ಸಾಂ ಪೊಲೀಸರು ಧ್ವಂಸಗೊಳಿಸಿದ್ದರು.

           ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಸ್ಸಾಂನ ಲೈಲಾಪುರ ಎಂಬಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. ಆದರೆ, ಆ ಪ್ರದೇಶ ತನ್ನದು ಎಂದು ಮಿಜೋರಾಂ ವಾದಿಸಿತ್ತು. ಹೀಗಾಗಿ ಮತ್ತೊಮ್ಮೆ ಘರ್ಷಣೆ ನಡೆದಿತ್ತು.

                             ಸೋಮವಾರದ ಸಂಘರ್ಷಕ್ಕೆ ಕಾರಣವೇನು?

          ಸ್ಥಳೀಯ ವರದಿಗಳ ಪ್ರಕಾರ ವಿವಾದಾತ್ಮಕ ಗಡಿಯ ಲೈಲಾಪುರ ಎಂಬಲ್ಲಿ ಎರಡೂ ಕಡೆಯ ಪೊಲೀಸರ ನಡುವೆ ಮೊದಲು ಘರ್ಷಣೆ ನಡೆದಿದೆ. ನಂತರ ಉದ್ವಿಗ್ನತೆ ಉಂಟಾಗಿದೆ.

         'ನಮ್ಮ ಪೊಲೀಸ್ ಗಡಿಠಾಣೆಯನ್ನು ಮಿಜೋರಾಂ ಪೊಲೀಸರು ಆಕ್ರಮಿಸಿಕೊಂಡಿದ್ದರು. ಅದನ್ನು ಮರಳಿ ನಿಯಂತ್ರಣಕ್ಕೆ ತೆಗದುಕೊಂಡಿದ್ದೇವೆ. ಈ ಪ್ರಕ್ರಿಯೆಯಲ್ಲಿ ಸಂಘರ್ಷ ನಡೆದಿದೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ.

            'ಸೋಮವಾರ ಬೆಳಿಗ್ಗೆ 11.30ರ ಹೊತ್ತಿಗೆ ಅಸ್ಸಾಂನ 200ಕ್ಕೂ ಹೆಚ್ಚು ಪೊಲೀಸರು ನಮ್ಮ ಗಡಿಯೊಳಗೆ ಇರುವ ಆಟೊರಿಕ್ಷಾ ನಿಲ್ದಾಣಕ್ಕೆ ಬಂದು, ಅಲ್ಲಿದ್ದ ಮಿಜೋರಾಂ ಪೊಲೀಸರನ್ನು ಒತ್ತಾಯಪೂರ್ವಕವಾಗಿ ಹಿಮ್ಮೆಟ್ಟಿಸಿದ್ದಾರೆ. ವಾಹನಗಳನ್ನು ಧ್ವಂಸ ಮಾಡಿದ್ದಾರೆ. ನಮ್ಮ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ' ಎಂದು ಮಿಜೋರಾಂ ಮುಖ್ಯಮಂತ್ರಿ ಜೋರಮಾಥಂಗಾ ಅವರು ಹೇಳಿದ್ದಾರೆ.
‌            ಆದರೆ, ಪೊಲೀಸರ ನಡುವೆ ಸಂಭವಿಸಿದ ಈ ಘರ್ಷಣೆಯು ಈಗ ಎರಡೂ ರಾಜ್ಯಗಳ ನಡುವೆ ವ್ಯಾಪಿಸಿಕೊಂಡಿದೆ. ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries